ಜಿಲ್ಲೆಯ ಹಲವೆಡೆ ಹೋಳಿ ಸಂಭ್ರಮ

CTD 08 Holi -03
Published on

ಚಿತ್ರದುರ್ಗ: ನಗರ ಸೇರಿ ಜಿಲ್ಲೆಯ ಹಲವೆಡೆ ಹೋಳಿ ಹಬ್ಬವನ್ನು ಬುಧವಾರ ಬಿಸಿಲು ಲೆಕ್ಕಿಸದೆ ಸಂಭ್ರಮದಿಂದ ಹಲವರು ಆಚರಿಸಿದರು.

ಹಬ್ಬದ ಅಂಗವಾಗಿ ಮಂಗಳವಾರ ರಾತ್ರಿ ಕೋಟೆನಗರಿಯ ವಿವಿಧ ಬಡಾವಣೆ, ರಸ್ತೆ ಬದಿಗಳಲ್ಲಿ, ದೇಗುಲಗಳ ಸಮೀಪದಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಕಾಮನನ್ನು ಪ್ರತಿಷ್ಠಾಪಿಸಿ, ಹಾಡುಗಳನ್ನು ಹೇಳಿ ಕೂಗುತ್ತ ದಹಿಸಿದರು.

ಮರುದಿನ ಬುಧವಾರ ಬೆಳಗ್ಗೆ 6.30ರಿಂದಲೇ ಯುವಕ-ಯುವತಿಯರು, ಚಿಣ್ಣರು ವಿವಿಧ ವರ್ಣದ ಬಣ್ಣಗಳನ್ನು ಕೈಯಲ್ಲಿಡಿದು ಬಣ್ಣದಾಟವಾಡಲು ಬೀದಿಗೆ ಇಳಿದಿದ್ದು ಕಂಡುಬಂತು. ಮಧ್ಯಾಹ್ನ 1ರವರೆಗೂ ಈ ಪ್ರಕ್ರಿಯೆ ಹಲವೆಡೆ ಮುಂದುವರೆಯಿತು.

ಬಣ್ಣ ಎರಚಿದ ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಡೊಳ್ಳು, ತಮಟೆ ವಾದ್ಯಗಳು ಯುವಕರನ್ನು ಮತ್ತಷ್ಟು ಸಂಭ್ರಮದಲ್ಲಿ ತೇಲಾಡುವಂತೆ ಮಾಡಿತು. ದ್ವಿಚಕ್ರ ವಾಹನಗಳಲ್ಲಿ ವಿವಿಧ ಬಡಾವಣೆ ಸುತ್ತಾಡಿ ಗೆಳೆಯ-ಗೆಳತಿಯರಿಗೆ ಬಣ್ಣ ಎರಚಿ ಸಂಭ್ರಮಿಸಿದರು.

ಮಡಿಕೆ ಒಡೆದು ಸಂಭ್ರಮ

ಕೋಟೆ ರಸ್ತೆ, ದೊಡ್ಡಪೇಟೆ, ಬುರುಜನಹಟ್ಟಿ ಸೇರಿ ಹಲವೆಡೆ ಮಡಿಕೆ ಒಡೆದು ಸಂಭ್ರಮಿಸಲಾಯಿತು. ಜೋಗಿಮಟ್ಟಿ ರಸ್ತೆ, ಸುಣ್ಣದಗುಮ್ಮಿ, ಫಿಲ್ಟರ್‌ಹೌಸ್, ಗೋಪಾಲಪುರ, ಜೆಸಿಆರ್ ಬಡಾವಣೆಯಲ್ಲೂ ಬಣ್ಣದಾಟ ಆಡಲಾಯಿತು. ಚಿಣ್ಣರು ಪಿಚಕಾರಿ, ಪಿಸ್ತೂಲ್, ಬಾಟಲಿಗಳಲ್ಲಿ ನೀರಿನೊಂದಿಗೆ ಬಣ್ಣ ಮಿಶ್ರಣ ಮಾಡಿಕೊಂಡು ಸ್ನೇಹಿತರಿಗೆ ಎರಚಿ ಖುಷಿ ಪಟ್ಟರು.

ಮೈ ತುಂಬಾ ಬಣ್ಣ ಆಗಿದ್ದರಿಂದಾಗಿ ಮಧ್ಯಾಹ್ನದ ನಂತರ ಹೊಂಡಗಳತ್ತ ಮುಖ ಮಾಡಿದ ಯುವಕರು ಈಜಾಡಿ ದೇಹ ಸ್ವಚ್ಛಗೊಳಿಸಿದರು.

ಜೈನ್ ಸಮುದಾಯ ಸಂಭ್ರಮ

ಜೈನ್ ಕಾಲನಿಗಳಲ್ಲಿ ಹೋಳಿ ಸಡಗರ ಕಂಡುಬಂದಿತು. ಉತ್ತರ ಭಾರತದಿಂದ ಇಲ್ಲಿಗೆ ಬಂದು ಕೆಲಸಕ್ಕೆ ಸೇರಿಕೊಂಡ ಯುವಕರು ಮಂಗಳವಾರವೇ ಮೆದೇಹಳ್ಳಿ ರಸ್ತೆ, ಬಿ.ಡಿ.ರಸ್ತೆಯಲ್ಲಿನ ಜೈನ್ ಸಮುದಾಯದ ಅಂಗಡಿಗಳಿಗೆ ಹೋಗಿ ಬಣ್ಣ ಎರಚಿ ಆಚರಿಸಿದರು.

ಮಡಿಕೆ ಒಡೆದು ಆನಂದಿಸಿದರು

ಹೋಳಿ ಆಚರಣೆ ಇತ್ತೀಚೆಗೆ ಕಾಲೇಜುಗಳಿಗೂ ವಿಸ್ತರಿಸಿದ್ದು, ನಗರದ ಎಸ್‌ಜೆಎಂ ಫಾರ್ಮಸಿ ಕಾಲೇಜಿನಲ್ಲಿ ಹೋಳಿ ಹಬ್ಬದ ಜತೆ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು. ವಿದ್ಯಾರ್ಥಿಗಳು ಬಣ್ಣ ಎರಚುವ ಮೂಲಕ ಸಂಭ್ರಮದಲ್ಲಿ ಮುಳುಗಿದರು. ಎಂ.ಫಾರ್ಮ ವಿದ್ಯಾರ್ಥಿನಿ ಜ್ಯೋತಿ, ಬಣ್ಣದ ಮಡಿಕೆ ಒಡೆದು ಗಮನಸೆಳೆದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net