

ಹೊಳೆನರಸೀಪುರ: ರೈತರಿಗೆ ನಿರೀಕ್ಷಿತ ಹಣ ದೊರೆಯದೆ ಭತ್ತ ಬೇಸಾಯದಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ರೈತರಲ್ಲಿ ಆತ್ಮಸ್ಥೈರ್ಯ ತುಂಬಿ ಯಾಂತ್ರೀಕೃತ ಭತ್ತ ಬೇಸಾಯಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತಾಲೂಕು ಘಟಕದ ಯೋಜನಾಧಿಕಾರಿ ಸುಮಿತ್ರಾ ಜೈನ್ ತಿಳಿಸಿದರು.
ತಾಲೂಕಿನ ಕೊಂಗಲಬೀಡು ಗ್ರಾಮದಲ್ಲಿ ಭಾನುವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತಾಲೂಕು ಘಟಕ ಆಯೋಜಿಸಿದ್ದ ಯಾಂತ್ರಿಕೃತ ಭತ್ತ ಬೇಸಾಯ ಯಂತ್ರಶ್ರೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಭತ್ತದ ಕೊರತೆಯಿಂದ ಆಹಾರ ಸಮಸ್ಯೆ ತಲೆದೋರಬಾರದು ಎಂಬ ದೂರದೃಷ್ಟಿಯ ಆಲೋಚನೆಯಿಂದ ಯಾಂತ್ರೀಕೃತ ಬೇಸಾಯಕ್ಕೆ ಒತ್ತು ನೀಡಿದ್ದಾರೆ. ರೈತರು ಭತ್ತ ಬೇಸಾಯದಲ್ಲಿ ಸಂಪೂರ್ಣ ಯಾಂತ್ರಿಕೃತವಾಗಿ ಭೂಮಿಯ ಹದ, ಬಿತ್ತನೆ, ನಾಟಿ ಮತ್ತು ಕೊಯ್ಲ ಮಾಡಿದ್ದಲ್ಲಿ ಹೆಚ್ಚಿನ ಇಳುವರಿ ಜತೆಯಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಕಂಡು ನೆಮ್ಮದಿಯ ಬದುಕಿಗೆ ಭತ್ತ ಬೇಸಾಯ ಪ್ರೇರಣೆಯಾಗಲಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತಾಲೂಕು ಘಟಕ ಕೃಷಿ ಯಂತ್ರಧಾರೆ ಪ್ರಬಂಧಕ ನಾಗೇಶ್, ಕೃಷಿ ಅಧಿಕಾರಿ ಹನುಮಂತಪ್ಪ, ಸಾವಯವ ಕೃಷಿಕ ರೈತ ಹೊಯ್ಸಳ ಅಪ್ಪಾಜಿ, ಪ್ರಗತಿ ಬಂಧು ಸಂಘಗಳ ಮಾಜಿ ಅಧ್ಯಕ್ಷ ವೆಂಕಟೇಶ್ ಮಾತನಾಡಿದರು.
ಭತ್ತ ಕೃಷಿ ಬೇಸಾಯ ಮಾಡಲು ರೈತರಿಗೆ ಟ್ರೇ ಗಳನ್ನು ವಿತರಿಸಲಾಯಿತು. ಗ್ರಾಪಂ ಮಾಜಿ ಸದಸ್ಯ ಆಶಾ, ಮಂಜುಳಾ, ಕಲಾವತಿ, ಪ್ರಗತಿಬಂಧು ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು, ರೈತರು ಹಾಜರಿದ್ದರು.