

ಹೊಳೆನರಸೀಪುರ: ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಮಂಗಳವಾರ ಜಿಲ್ಲಾ ಗ್ರಂಥಾಲಯದ ಉಪ ನಿರ್ದೇಶಕ ವೆಂಕಟೇಶ್ ಭೇಟಿ ನೀಡಿದ್ದರು.
ಗ್ರಂಥಾಲಕ್ಕೆ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ಶೌಚಗೃಹ, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳ ಅಗತ್ಯತೆ ಮತ್ತು ಆಧಾರ್ ನೊಂದಣಿ ಕೇಂದ್ರದಿಂದ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಓದುಗರು ದೂರು ನೀಡಿದ್ದ ಹಿನ್ನೆಲೆಯಲ್ಲಿ ವೆಂಕಟೇಶ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಗ್ರಂಥಾಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಬೆಳಕಿನ ವ್ಯವಸ್ಥೆಗೆ ಸಂಬಂಧಿಸಿದಂತೆ ವಿದ್ಯುತ್ ಇಲಾಖೆ ಸಿಬ್ಬಂದಿ ಜತೆ ಚಿರ್ಚಿಸಿದ್ದು, ಶೀಘ್ರವೇ ಸರಿಪಡಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳ ಪಟ್ಟಿ ಪಡೆದಿದ್ದು, ಖರೀದಿಸಿ ಕಳುಹಿಸಿಕೊಡಲಾಗುವುದು ಎಂದರು.
ಆಧಾರ್ ನೊಂದಣಿ ಕೇಂದ್ರದ ಬಗ್ಗೆ ಮಾತಾಡಲು ನಾನು ಶಕ್ತನಲ್ಲ. ಪುರಸಭೆಯು ಗ್ರಂಥಾಲಯಕ್ಕೆ ಉಚಿತವಾಗಿ ಕಟ್ಟಡ ನೀಡಿದ್ದು, ಇದರ ಬಗ್ಗೆ ತಹಸೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಯನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಿ ಆಧಾರ್ ಕೇಂದ್ರ ಸ್ಥಳಾಂತರಕ್ಕೆ ಕೋರಲಾಗುವುದು ಎಂದು ಭರವಸೆ ನೀಡಿದರು.
ಗ್ರಂಥಾಲಯದ ಮೇಲ್ವಿಚಾರಕ ಜಯಲಿಂಗಪ್ಪ ಇದ್ದರು.