ಚೌಡೇಶ್ವರಿ ದೇವಿ ಮಹಾ ರಥೋತ್ಸವ

15 JLR
Published on

ಜಗಳೂರು: ತಾಲೂಕಿನ ಗುರುಸಿದ್ದಾಪುರ (ಮಡ್ರಳ್ಳಿ) ಅರಣ್ಯ ಪ್ರದೇಶದಲ್ಲಿ ನೆಲೆಸಿರುವ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿ ಮಹಾ ರಥೋತ್ಸವ ಶುಕ್ರವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮುಂಜಾನೆ ದೇವಿಯ ಮೂರ್ತಿಗೆ ಹೊಳೆ ಪೂಜೆ ನೆರವೇರಿಸಲಾಯಿತು. ನಂತರ ದೇವಿಗೆ ವಿಶೇಷ ಪೂಜೆ, ಮಂಗಳಾರತಿ, ಅಭಿಷೇಕ, ಗಜೋತ್ಸವ, ಕಂಕಣಧಾರಣೆ, ವೃಷಭೋತ್ಸವ ಸೇರಿ ಧಾರ್ವಿುಕ ಪೂಜಾ ಕೈಂಕರ್ಯಗಳು ನಡೆದವು. ತೇರನ್ನು ಹೂವಿನ ಹಾರ, ಬಾವುಟಗಳು ಹಾಗೂ ವಿವಿಧ ವರ್ಣದ ಬಟ್ಟೆಗಳಿಂದ ಅಲಂಕರಿಸಲಾಗಿತ್ತು.

ನಾಲ್ಕು ದಿನ ನಡೆಯುವ ತಾಯಿ ಚೌಡೇಶ್ವರಿ ದೇವಿಯ ಜಾತ್ರೆ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಬೆಳಗ್ಗೆಯಿಂದ ದೇವಸ್ಥಾನದ ಆವರಣದಲ್ಲಿ ದೇವಿಯ ದರ್ಶನಕ್ಕೆ ಒಂದು ಕಿ.ಮೀ. ದೂರದವರೆಗೂ ಭಕ್ತರು ಸಾಲಿನಲ್ಲಿ ನಿಂತು ಹರಕೆ ಸಲ್ಲಿಸಿದರು.

ಸಂಜೆ 4 ಕ್ಕೆ ದೇವಸ್ಥಾನದಿಂದ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ತೇರಿಗೆ ಮೂರು ಬಾರಿ ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ನಂತರ ಭಕ್ತರು ಘೊಷಣೆ ಕೂಗುತ್ತಾ ರಥವನ್ನು ಎಳೆದರು.

ರಥೋತ್ಸವಕ್ಕೆ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಹೊಸಪೇಟೆ, ಬೆಂಗಳೂರು, ತುಮಕೂರು ಸೇರಿ ವಿವಿಧ ಜಿಲ್ಲೆಗಳಿಂದ ಮತ್ತು ತಾಲೂಕಿನ ನೂರಾರು ಹಳ್ಳಿಗಳ ಭಕ್ತರು ಬಸ್, ಕಾರು, ಟ್ರ್ಯಾಕ್ಟರ್, ಬೈಕ್ ಮೂಲಕ ಆಗಮಿಸಿದ್ದರಿಂದ ರಸ್ತೆಯುದ್ದಕ್ಕೂ ಟ್ರಾಫಿಕ್ ಸಮಸ್ಯೆ ಎದುರಾಯಿತು. ಹೊಸಕೆರೆ, ಬಸವನಕೋಟೆ ರಸ್ತೆಯಲ್ಲಿ 2-3 ಕಿ.ಮೀ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಸ್ತೆ ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸಪಟ್ಟರು.

ಶಾಸಕ ಬಿ. ದೇವೇಂದ್ರಪ್ಪ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಜಿಪಂ ಮಾಜಿ ಸದಸ್ಯ ಕೆ.ಪಿ. ಪಾಲಯ್ಯ, ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್ ಸೇರಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.

15 ಲಕ್ಷಕ್ಕೆ ಪಟ ಹರಾಜು: ಸಂಜೆ ನಡೆದ ದೇವಿಯ ಪಟ ಹರಾಜಿನಲ್ಲಿ ಜಗಳೂರು ತಾಲೂಕಿನ ಕಾಂಗ್ರೆಸ್ ಶಾಸಕ ದೇವೇಂದ್ರಪ್ಪ ಅವರು 15 ಲಕ್ಷ ರೂ.ಗಳಿಗೆ ಪಟವನ್ನು ತಮ್ಮದಾಗಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net