

ಬೆಂಗಳೂರು: ಈಗಿನ ಯುವ ಸಮುದಾಯ ವೃತ್ತಿಯಲ್ಲಿ ವೈದ್ಯ, ಇಂಜಿನಿಯರ್, ತಂತ್ರಜ್ಞರಾಗಿದ್ದರೂ ಕುಟುಂಬದ ಆಚಾರ ವಿಚಾರ, ಸಂಪ್ರದಾಯವನ್ನು ಕಡೆಗಣಿಸದೆ ವೈದಿಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ಶಾಸಕ ರವಿಸುಬ್ರಮಣ್ಯ ಹೇಳಿದ್ದಾರೆ.
ಅಖಿಲ ಹವ್ಯಕ ಮಹಾಸಭಾ ವತಿಯಿಂದ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಗಾಯತ್ರಿ ಮಹೋತ್ಸವ’ದಲ್ಲಿ ಭಾಗವಹಿಸಿ ಮಾತನಾಡಿದರು.
ಹವ್ಯಕರು ಕೃಷಿ, ನಳಪಾಕ, ವಿಜ್ಞಾನ- ತಂತ್ರಜ್ಞಾನ, ವೈದ್ಯಕೀಯ ಮತ್ತಿತರ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಯುವಕರು ಸಾಫ್ಟ್ವೇರ್, ಇಂಜಿನಿಯರಿಂಗ್, ವೈದ್ಯಕೀಯ ಇನ್ನಿತರ ಉದ್ಯೋಗ ಅರಸಿಹೋದರೆ, ಮುಂದಿನ ದಿನಗಳಲ್ಲಿ ನಮ್ಮ ಸಂಪ್ರದಾಯ ಉಳಿಯುತ್ತದೆಯೇ ಎಂಬ ಅನುಮಾನ ಮೂಡುತ್ತದೆ. ಆದರೆ ಯಾವುದೇ ವೃತ್ತಿಯಲ್ಲಿದ್ದರೂ ಯುವಕರು ವೈದಿಕ ಸಂಪ್ರದಾಯ ಪಾಲಿಸಿಕೊಂಡು ಹೋಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಮಕ್ಕಳಿಗೆ ಸರಿಯಾದ ವಯಸ್ಸಿನಲ್ಲಿ ಬ್ರಹ್ಮೋಪದೇಶ ಮಾಡಿ, ಗಾಯತ್ರಿ ಮಂತ್ರ ಪಠಣ ಹೇಳಿಕೊಟ್ಟು ಸರಿಯಾದ ಮಾರ್ಗದರ್ಶನ ನೀಡುವುದು ಹಿರಿಯರ ಕರ್ತವ್ಯವಾಗಿದೆ. ಮದುವೆ ಮಾಡಬೇಕೆಂಬ ಕಾರಣಕ್ಕೆ ಉಪನಯನ ಮಾಡುವ ಸ್ಥಿತಿಗೆ ಬಂದು ತಲುಪಿದ್ದೇವೆ. ಹೀಗಿರುವಾಗ ಗಾಯತ್ರಿ ಮಂತ್ರದ 24 ಅಕ್ಷರಗಳ ಶಕ್ತಿ ಹೇಗೆ ಲಭಿಸುತ್ತದೆ ಎಂದು ಪ್ರಶ್ನಿಸಿದರು. ಗಾಯತ್ರಿ ಮಂತ್ರದ ಉಪಾಸನೆ ತಪಸ್ಸಿನ ಹಾಗೆ. ಮನೆಯಲ್ಲಿ ಹಿರಿಯರು ನಮ್ಮ ಸಂಸ್ಕೃತಿ, ಆಚಾರ- ವಿಚಾರ, ಸಂಪ್ರದಾಯ ಪಾಲಿಸಿ ಮುಂದಿನ ಪೀಳಿಗೆಗೆ ಪಸರಿಸುವ ಮೂಲಕ ಬ್ರಾಹ್ಮಣ್ಯವನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.
ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ, ಉಪಾಧ್ಯಕ್ಷ ಶ್ರೀಧರ್ ಭಟ್, ಪ್ರಧಾನ ಕಾರ್ಯದರ್ಶಿ ಸಿ.ಎ. ವೇಣುವಿಘ್ನೇಶ ಸಂಪ ಹಾಗೂ ಸಂಚಾಲಕ ಕೃಷ್ಣಮೂರ್ತಿ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಇಡೀ ದಿನ ಕಾರ್ಯಕ್ರಮ ವೈವಿಧ್ಯ
ಗಾಯತ್ರಿ ಮಹೋತ್ಸವಕ್ಕೂ ಮುನ್ನ ಯಶವಂತಪುರದ ಗಾಯತ್ರಿ ದೇವಸ್ಥಾನದಿಂದ ಹವ್ಯಕ ಭವನದವರೆಗೆ ಪಲ್ಲಕ್ಕಿಯಲ್ಲಿ ಗಾಯತ್ರಿ ದೇವಿಯ ಮೆರವಣಿಗೆ ನಡೆಸಲಾಯಿತು. ಗಾಯಕ ಶಶಿಧರ್ ಕೋಟೆ ‘ಗಾಯತ್ರಿ ನಮನ’ ನಡೆಸಿಕೊಟ್ಟರು. ಶತಾವಧಾನಿ ಡಾ.ಆರ್. ಗಣೇಶ್ ‘ಗಾಯತ್ರಿ ತತ್ವ’, ಜಗದೀಶ ಶರ್ವ, ಸಂಪ ‘ಗಾಯತ್ರಿ ಉಪದೇಶ- ಉಪನಯನ’, ಶಿವರಾಮ ಅಗ್ನಿಹೋತ್ರಿ ‘ಅಗ್ನಿಹೋತ್ರದ ವೈಶಿಷ್ಟ್ಯ, ಡಾ. ಕೆ. ರಂಗರಾಜ ಅಯ್ಯಂಗಾರ್ ‘ಗಾಯತ್ರಿ ಮಂತ್ರದ ವೈಜ್ಞಾನಿಕ ಹಿನ್ನೆಲೆ’ ಕುರಿತು ಮಾತನಾಡಿದರು. ಅರುಂಧತಿ ವಸಿಷ್ಠ ಮತ್ತು ಮನೋಜ್ ವಸಿಷ್ಠ ಹಾಗೂ ಗುರುಕಿರಣ ಹೆಗಡೆ ‘ಗಾಯತ್ರಿ ನಾದನಮನ’ ಪ್ರಸ್ತುತಪಡಿಸಿದರು. ಡಾ. ಪಾದೆಕಲ್ಲು ವಿಷ್ಣು ಭಟ್ಟ ‘ಬ್ರಹ್ಮಹಜ್ಞವೆಂಬ ನಿತ್ಯಕರ್ಮ’, ಹಿತ್ಲಳ್ಳಿ ನಾಗೇಂದ್ರ ಭಟ್ಟ ‘ಸಂಧ್ಯಾವಂದನೆ ಮಹತ್ವ’ ಹಾಗೂ ಯಕ್ಷಗಾನ, ನೃತ್ಯ ಸೇರಿ ಇನ್ನಿತರ ಕಾರ್ಯಕ್ರಮ ನಡೆಸಿಕೊಟ್ಟರು.
ಗಾಯತ್ರಿ ಮಂತ್ರದಲ್ಲಿ ಬ್ರಾಹ್ಮಣರ ಶಕ್ತಿ
ಗಾಯಿತ್ರಿ ಮಂತ್ರ ಉಪಾಸನೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗಲಿದೆ ಎಂಬುದು ಐಐಟಿ ಹಾಗೂ ಏಮ್್ಸ ವೈದರು ನಡೆಸಿದ ಸಂಶೋಧನೆಯಲ್ಲಿ ದೃಢಪಟ್ಟಿದೆ. ಗಾಯತ್ರಿ ಮಂತ್ರ ಉಪಾಸನೆಯಿಂದ ದೇಹದ 72 ಸಾವಿರ ನರವ್ಯೂಹ ಶುದ್ಧಿಯಾಗಿ, ಕಲಿಕಾ ಕೌಶಲ ವೃದ್ಧಿಸುತ್ತದೆ ಎಂದು ಹಿರಿಯ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಹೇಳಿದರು. ಬ್ರಾಹ್ಮಣರ ಕ್ರಿಯಾಶಕ್ತಿ, ಮನೋಶಕ್ತಿ ಹಾಗೂ ದೈಹಿಕ ಶಕ್ತಿ ಈ ಮಂತ್ರದಲ್ಲಿದೆ ಎಂದು ವಿವರಿಸಿದರು.
ಬ್ರಾಹ್ಮಣರನ್ನು ಒಗ್ಗೂಡಿಸುವಂತಹ ಕಾರ್ಯಕ್ರಮ ಇದಾಗಿದೆ. ಸರ್ಕಾರ ಬ್ರಾಹ್ಮಣರ ಅನುಕೂಲಕ್ಕಾಗಿ ಯೋಜನೆಗಳನ್ನು ಮತ್ತು ನೀತಿಯನ್ನು ರೂಪಿಸಿ ಜಾರಿಗೆ ತರಬೇಕು. ಬ್ರಾಹ್ಮಣರಲ್ಲೂ ಬಡವರಿದ್ದು, ಅವರ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. | ಡಾ.ಕೆ.ಪಿ. ಪುತ್ತೂರಾಯ ವಾಗ್ಮಿ