ಗ್ರಾಮಸಭೆ ನಡೆಸಿ ಜನಾಂಗದ ಸಮಸ್ಯೆ ಬಗೆಹರಿಸಿ

indi pallavi
ಇಂಡಿ ತಾಲೂಕಿನ ಬಬಲಾದ ಗ್ರಾಪಂ ವ್ಯಾಪ್ತಿಯ ವಿಶ್ವಜ್ಞಾನಿ ಗ್ರಂಥಾಲಯ ಸಭಾಭವನದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಮಾತನಾಡಿದರು.
Published on

ಇಂಡಿ: ತಾಲೂಕಿನ ಬಬಲಾದ, ಚವಡಿಹಾಳ ಹಾಗೂ ಇಂಗಳಗಿ ಗ್ರಾಪಂ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮಗಳಿಗೆ ಸೋಮವಾರ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಭೇಟಿ ನೀಡಿ ಸಮುದಾಯದವರ ಕುಂದು- ಕೊರತೆ ಆಲಿಸಿದರು.

ಬಬಲಾದ ಗ್ರಾಪಂ ವ್ಯಾಪ್ತಿಯ ವಿಶ್ವಜ್ಞಾನಿ ಗ್ರಂಥಾಲಯ ಸಭಾಭವನದಲ್ಲಿ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಚೆನ್ನದಾಸರ ಜನಾಂಗದ ಕುಟುಂಬಗಳ ಸಮಸ್ಯೆ ಆಲಿಸಿದರಲ್ಲದೆ, ಪಿಡಿಒಗೆ ಕೂಡಲೇ ಗ್ರಾಮಸಭೆ ನಡೆಸಿ ಸರ್ಕಾರದ ನಿಯಮದಂತೆ ಜನಾಂಗದ ಸಮಸ್ಯೆ ಪರಿಸಲು ಸೂಚಿಸಿದರು.

ಚವಡಿಹಾಳ ಗ್ರಾಮದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ಭಾಗ್ಯವಂತಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ, ಶಿಕ್ಷಕರ ಸಂಖ್ಯೆಯ ಮಾಹಿತಿ ಪಡೆದರಲ್ಲದೆ, ಶಿಕ್ಷಣ ಸಂಸ್ಥೆಯಲ್ಲಿ 1600 ರಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರಲ್ಲದೆ, ಮುಖ್ಯೋಪಾಧ್ಯಾಯರಿಂದ ಅಹವಾಲು ಸ್ವೀಕರಿಸಿದರು. ಎಲ್ಲ ವಿದ್ಯಾರ್ಥಿಗಳು ಉತ್ತಮ ರೀತಿಯಿಂದ ಶಿಕ್ಷಣ ಪಡೆದು ಸ್ವಾವಲಂಬಿಯಾಗಿ ಬದುಕಬೇಕು. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅಲ್ಲದೆ, ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಸಿ.ಜೆ. ಪಾರೆ ಅವರು ವಿಡಿಯೋ ಕ್ಲಿಪ್ ಮೂಲಕ ಗ್ರಾಪಂ ವ್ಯಾಪ್ತಿಯಲ್ಲಿನ ಅಲೆಮಾರಿ ಕುಟುಂಬಕ್ಕೆ ಒದಗಿಸಿರುವ ಸೌಲಭ್ಯ, ನರೇಗಾದಲ್ಲಿ ನೀಡಿದ ಉದ್ಯೋಗ ಕುರಿತು ಮಾಹಿತಿ ನೀಡಿದರು.

ಇಂಡಿ ಪಟ್ಟಣದ ಹರಿಣಶಿಕಾರಿ ಜನಾಂಗದ ಕುಟುಂಬಗಳಿಗೆ ಭೇಟಿ ನೀಡಿ ಅಹವಾಲು ಪಡೆದರಲ್ಲದೆ, ಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಹಾಗೂ ಪ್ರತ್ಯೇಕ ಅಂಗನವಾಡಿ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಇಂಗಳಗಿ ಗ್ರಾಪಂ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮಕ್ಕೆ ತೆರಳಿ ಸಮುದಾಯದ ಚೆನ್ನದಾಸರ ಜನಾಂಗ ಕುಟುಂಬಗಳಿಂದ ಅಹವಾಲು ಸ್ವೀಕರಿಸಿ, ಮಹಿಳೆಯರಿಗೆ ಸ್ವ ಸಹಾಯ ಸಂಘಗಳಿಗೆ ಸಾಲಗಳನ್ನು ನೀಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ತಾಪಂ ಇಒ ನಂದೀಪ ರಾಠೋಡ, ಸಮಾಜ ಕಲ್ಯಾಣ ಇಲಾಖೆಯ ಉಮೇಶ್ ಲಮಾಣಿ, ತಹಸೀಲ್ದಾರ್ ವಿ.ಎಸ್. ಕಡಕಭಾವಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಆಲಗೂರ, ಪೊಲೀಸ್ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಪಿಡಿಒ, ಸದಸ್ಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಕುಟುಂಬದ ಜನರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net