

ಶಿರಸಿ: 4ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಅಡಿಯಲ್ಲಿ ನಿರ್ವಿುಸಲಾಗುತ್ತಿರುವ ಬಿಎಸ್ಎನ್ಎಲ್ ಮೊಬೈಲ್ ಗೋಪುರಗಳಿಗೆ ಇನ್ನೂ ಕೆಲ ಗ್ರಾಮಗಳಲ್ಲಿ ಅರಣ್ಯ ಇಲಾಖೆಯಿಂದ ಜಾಗ ಮಂಜೂರಿ ವಿಳಂಬವಾಗಿದೆ. ಶೀಘ್ರದಲ್ಲಿಯೇ ಸಭೆ ನಡೆಸಿ ಈ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಜಂಬೆಕೊಪ್ಪದಲ್ಲಿ ಶನಿವಾರ ಬಿಎಸ್ಎನ್ಎಲ್ ಗೋಪುರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 252 ಟವರ್ ಮಂಜೂರಾಗಿದ್ದವು. ಇವುಗಳ ನಿರ್ಮಾಣ ಕಾರ್ಯ ಈಗ ವೇಗವಾಗಿ ನಡೆಯುತ್ತಿದೆ. ಆದರೆ, ಕೆಲವೆಡೆಗಳಲ್ಲಿ ಅರಣ್ಯ ಅಥವಾ ಮಾಲ್ಕಿ ಜಾಗ ಸಿಗದ ಹಿನ್ನೆಲೆಯಲ್ಲಿ ತಗ್ಗಿನ ಪ್ರದೇಶಗಳಲ್ಲಿ ನಿರ್ವಣವಾಗಿವೆ. ಇದರಿಂದಾಗಿ ಕೆಲ ಗ್ರಾಮಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮೊಬೈಲ್ ತರಂಗ ತಲುಪುತ್ತಿಲ್ಲ. ಈಗ ಹೊಸದಾಗಿ 75 ಮೊಬೈಲ್ ಗೋಪುರಗಳು ಮಂಜೂರಾಗಿದ್ದು, ಇವುಗಳ ಜಾಗ ಗುರುತಿಸುವಿಕೆ ಪ್ರಗತಿಯಲ್ಲಿವೆ. ಸಾಧ್ಯವಾದಷ್ಟು ಗ್ರಾಮಗಳಲ್ಲಿ ಎತ್ತರದ ಜಾಗ ನೋಡಿಯೇ ಅಲ್ಲಿ ನಿರ್ವಿುಸಲಾಗುತ್ತದೆ. ಹಳ್ಳಿಯಲ್ಲಿ ಎತ್ತರದ ಸ್ಥಳ ಗುರುತಿಸಿ ಅಲ್ಲಿ ಸ್ಥಾಪಿಸಲಾಗುವುದು. ಹಳ್ಳಿಯ ಪ್ರತಿ ಮನೆಗೂ ಬಿಎಸ್ಎನ್ಎಲ್ ಮೊಬೈಲ್ ತರಂಗ ತಲುಪುವಂತೆ ಮಾಡಲಾಗುವುದು ಎಂದರು.
ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯಲ್ಲಿ 50ಕ್ಕೂ ಅಧಿಕ ಟವರ್ಗಳ ಉದ್ಘಾಟನೆ ಮಾಡಲಾಗುತ್ತದೆ. ಈ ಗೋಪುರಗಳಿಗೆ ವಿದ್ಯುತ್ ಹಾಗೂ ಸೋಲಾರ್ ಶಕ್ತಿ ಪೂರೈಸಲಾಗಿದೆ. ಒಂದೊಮ್ಮೆ ಹಳ್ಳಿಯಲ್ಲಿ ವಿದ್ಯುತ್ ತೊಡಕು ಉಂಟಾದರೂ ಸೋಲಾರ್ ಶಕ್ತಿಯನ್ನು ಬಳಸಿಕೊಂಡು ಟವರ್ ಕೆಲಸ ಮಾಡಲಿದೆ. ಈಗಾಗಲೇ ಇರುವ 2ಜಿ ತಂತ್ರಜ್ಞಾನದ ಮೊಬೈಲ್ ಗೋಪುರಗಳನ್ನು 4ಜಿಗೆ ಬದಲಿಸುವ ಕಾರ್ಯ ಪ್ರಗತಿಯಲ್ಲಿದೆ. ಹಳೇ ಮೊಬೈಲ್ ಗೋಪುರಗಳಲ್ಲಿ 90ಕ್ಕೂ ಅಧಿಕ ಗೋಪುರಗಳನ್ನು 4ಜಿ ತಂತ್ರಜ್ಞಾನಕ್ಕೆ ಬದಲಿಸಲಾಗಿದೆ ಎಂದರು.
4ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಪ್ರತಿ ಹಳ್ಳಿಗೂ ಈ ಯೋಜನೆ ಮೂಲಕ ಮೊಬೈಲ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಉತ್ತರ ಕನ್ನಡಕ್ಕೆ ಮಂಜೂರಾದ 252 ಹೊಸ ಟವರ್ಗಳಲ್ಲಿ 202 ಟಾವರ್ಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಒದಗಿಸಲಾಗುತ್ತಿದೆ. ಉಳಿದ 50 ಟಾವರ್ಗಳಿಗೆ ಮೈಕ್ರೋ ತರಂಗಾಂತರ ಬಳಸಿ ಸಂಪರ್ಕ ಜೋಡಿಸಲಾಗುತ್ತಿದೆ. ಇನ್ನೂ ಕೆಲ ಗ್ರಾಮಗಳಲ್ಲಿ ಮೊಬೈಲ್ ಗೋಪುರ ನಿರ್ವಣಕ್ಕೆ ಅರಣ್ಯ ಇಲಾಖೆಯಿಂದ ಉಂಟಾಗಿರುವ ತೊಡಕನ್ನು ಬಗೆಹರಿಸಬೇಕಿದ್ದು, ಶೀಘ್ರದಲ್ಲಿಯೇ ಆ ಕಾರ್ಯ ನಡೆಸಲಿದ್ದೇನೆ ಎಂದರು.
ಬಿಎಸ್ಎನ್ಎಲ್ನ ಡಿಜಿಎಂ ರಾಜಕುಮಾರ, ಎಜಿಎಂ ಸಂತೋಷ ಚೌಹಾಣ, ಅವಿನಾಶ ಪೂಜಾರಿ, ವಿಕ್ರಂ ಸಿಂಗ್ ಹಾಗೂ ಸ್ಥಳೀಯರಿದ್ದರು.