

ಹೊಳಲ್ಕೆರೆ: ಜನರ ಆರೋಗ್ಯ ರಕ್ಷಣೆಗಾಗಿ ನರೇಂದ್ರ ಮೋದಿ ಆಯುಷ್ಮಾನ್ ಕಾರ್ಡ್, ಜನೌಷಧ ಮಳಿಗೆ ಸೇರಿ ಅನೇಕ ಸೌಲಭ್ಯ ಕಲ್ಪಿಸಿದ್ದಾರೆ. ಆದರೆ, ಅವುಗಳನ್ನು ತಲುಪಿಸುವಲ್ಲಿ ಇಲಾಖೆ ಸಿಬ್ಬಂದಿ, ವೈದ್ಯರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಶಾಸಕ ಚಂದ್ರಪ್ಪ ಬೇಸರಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭವ ಕಾರ್ಡ್ ವಿತರಿಸಿ ಮಾತನಾಡಿದರು.
ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆ ಸೇರಿ ವಿವಿಧ ಸಂದರ್ಭ 10ರಿಂದ 20 ಸಾವಿರ ರೂ. ಲಂಚ ಪಡೆಯಲಾಗುತ್ತಿದೆ. ಹಣ ಕೊಡದಿದ್ದರೆ ದಾವಣಗೆರೆ, ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಹೇಳುತ್ತಿದ್ದಾರೆ ಎಂಬ ದೂರು ಇದೆ. ಇದು ಬದಲಾಗದಿದ್ದರೆ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಸಚಿವರಿಗೆ ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದರು.
ಅಧಿಕಾರ ಮತ್ತು ಜೀವ ಶಾಶ್ವತವಲ್ಲ. ಇರುವಷ್ಟು ದಿನ ಹತ್ತಾರು ಜನರಿಗೆ ಒಳ್ಳೆಯದು ಮಾಡಲು ಶ್ರಮಿಸಿ. ಯಾರನ್ನೋ ಮೆಚ್ಚಿಸುವ ಕಾರಣಕ್ಕೆ ಕಾನೂನು ಬಾಹಿರ ಕೆಲಸ ಮಾಡಬೇಡಿ. ಆಗ ನಿಮ್ಮನ್ನು ಜನ ದೇವರ ಸ್ಥಾನದಲ್ಲಿಟ್ಟು ಗೌರವಿಸುತ್ತಾರೆ ಎಂದು ಕಿವಿಮಾತು ಹೇಳಿದರು.