ಸಿದ್ದು ಆಡಳಿತ ಸ್ಮರಿಸುತ್ತಿದ್ದಾರೆ ಜನ

Holalkere, Congress, Former Minister H. Anjaneya, Meet,
Published on

ಚಿತ್ರದುರ್ಗ: ರಾಜ್ಯದಲ್ಲಿ ಜನತೆ ಸಿದ್ದರಾಮಯ್ಯ ನೇತೃತ್ವದ ಆಡಳಿತವನ್ನು ಸ್ಮರಿಸುತ್ತಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗೂಡಿ ಹೊರಟರೆ ಕನಿಷ್ಠ 150ಕ್ಕೂ ಹೆಚ್ಚು ಸ್ಥಾನದಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯಲಿದೆ ಎಂದು ಕೆಪಿಸಿಸಿ ಉನ್ನತ ಸಮಿತಿ ಸದಸ್ಯ, ಮಾಜಿ ಸಚಿವ ಎಚ್.ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಗಣಪತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್ ಸಂಘಟನಾ ಸಭೆಯಲ್ಲಿ ಮಾತನಾಡಿ, ಬದ್ಧತೆ ರಹಿತ, ಜನ ವಿರೋಧಿ ಆಡಳಿತದಲ್ಲಿ ಮುಳುಗಿರುವ ಬಿಜೆಪಿ ಶಾಸಕರ ವಿರುದ್ಧ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ಬೆಲೆ ಏರಿಕೆ, ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿಯಿಂದ ಜನರ ಬದುಕು ಮೂರಾಬಟ್ಟೆಯಾಗಿದೆ ಎಂದು ಹೇಳಿದರು.

ದುಡ್ಡು ಕೊಳ್ಳೆ ಹೊಡೆಯುವ ಮಾರ್ಗವನ್ನು ಬಿಜಿಪಿ ಶಾಸಕರು ಕಂಡುಕೊಂಡಿದ್ದಾರೆ. ಈ ಕಾರಣಕ್ಕೆ ಎಲ್ಲಿಯೂ ಬಡವರಿಗೆ ಮನೆ, ನಿವೇಶನ ನೀಡುವ ಕಾರ್ಯ ಕೈಗೊಳ್ಳುತ್ತಿಲ್ಲ. ಕೇವಲ ಕೆರೆ ಹೂಳೆತ್ತಲು ಆಸಕ್ತಿ ತೋರುತ್ತಿದ್ದಾರೆ. ಈ ಯೋಜನೆಗಳಲ್ಲಿ ಶೇ.70ರಷ್ಟು ಪರ್ಸೆಂಟ್ ಹಣ ಲಪಾಟಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಸಾಸಲು ಸತೀಶ್ ಮಾನಾಡಿ, ಬಲಿದಾನದ ಮೂಲಕ ಬ್ರಿಟಿಷರ ಕಪಿಮುಷ್ಠಿಯಿಂದ ಭಾರತವನ್ನು ಮುಕ್ತಗೊಳಿಸಿದ ಕಾಂಗ್ರೆಸ್ಸಿಗರೇ ಭಾರತ ಮಾತೆಯ ನೈಜ ವಾರಸುದಾರರು ಎಂದು ಅಭಿಪ್ರಾಯಪಟ್ಟರು.

ಬ್ರಿಟಿಷರು ದೋಚಿದ್ದ ರಾಷ್ಟ್ರದ ಸಂಪತ್ತನ್ನು ಮರು ಸೃಷ್ಟಿಸಲು, ಅಭಿವೃದ್ಧಿಯತ್ತ ಕೊಂಡೊಯ್ಯಲು ನೆಹರು, ಇಂದಿರಾಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತಿತರ ಪ್ರಧಾನಮಂತ್ರಿಗಳು ಶ್ರಮಿಸಿದ್ದಾರೆ. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿ ಅವರು ಲೂಟಿ ಹೊಡೆಯುವರಿಗೆ, ಉದ್ಯಮಿಗಳ ವಶಕ್ಕೆ ಒಪ್ಪಿಸುತ್ತಿದ್ದಾರೆ. ಬಿಜೆಪಿಗರು 40 ಪರ್ಸೆಂಟ್ ಮೂಲಕ ದೇಶವನ್ನು ದೋಚುತ್ತಿದ್ದಾರೆ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಾಟಿಹಳ್ಳಿ ಶಿವಣ್ಣ, ಜಿಪಂ ಮಾಜಿ ಸದಸ್ಯರಾದ ಲೋಹಿತ್ ಕುಮಾರ್, ಡಿ.ಕೆ.ಶಿವಮೂರ್ತಿ, ಅಶೋಕ್, ರಂಗಸ್ವಾಮಿ, ತಾಳಿಕಟ್ಟೆ ಗಂಗಾಧರ್, ಡಾ. ಕೆ.ಅನಂತ್, ಪಪಂ ಮಾಜಿ ಅಧ್ಯಕ್ಷ ಅಲೀಮಣ್ಣ, ಹೊಸದುರ್ಗದ ಗೋ.ತಿಪ್ಪೇಶ್, ಮಧುಪಾಲೇಗೌಡ, ಲೋಕೇಶ್ ನಾಯ್ಕ, ದುರುಗೇಶ್ ಪೂಜಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net