ಶ್ರೀಮಂತಗಡದಲ್ಲಿ ಹೊಳಲಮ್ಮದೇವಿ ಕಾರ್ತಿಕೋತ್ಸವ

SRT HOLALAMMA DEVI
Published on

ಶಿರಹಟ್ಟಿ: ತಾಲೂಕಿನ ಶ್ರೀಮಂತಗಡದ ಆದಿಶಕ್ತಿ ಶ್ರೀಹೊಳಲಮ್ಮದೇವಿಗೆ ಕಾರ್ತಿಕ ಮಾಸದ ಕೊನೆ ಮಂಗಳವಾರ ಡಿ.3ರಂದು ದೇವಸ್ಥಾನ ಕಮಿಟಿ ವತಿಯಿಂದ ಕಾರ್ತಿಕೋತ್ಸವ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 6 ಗಂಟೆಗೆ ದೇವಿಗೆ ವಿಶೇಷ ಅಭಿಷೇಕ ಮತ್ತು ಪೂಜೆ ನೆರವೇರಿಸಲಾಗುವುದು. ಸಂಜೆ 7ಕ್ಕೆ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಜರುಗಲಿದೆ. ಬಳಿಕ ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ಮಹಾ ಪ್ರಸಾದ ನಡೆಯಲಿದೆ.

ಬುಧವಾರದಿಂದ ದೇವಿ ದರ್ಶನವಿಲ್ಲ: ದೇವಿ ಗರ್ಭಗುಡಿಯು ಶಿಥಿಲಗೊಂಡಿದ್ದರಿಂದ ಪ್ರಾಚ್ಯವಸ್ತು ಇಲಾಖೆಯವರು ಬುಧವಾರದಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದ್ದು, ಬುಧವಾರದಿಂದ ದೇವಿ ಮೂರ್ತಿ ದರ್ಶನ ಭಾಗ್ಯ ಇರುವುದಿಲ್ಲ.

ದೇವಿ ಮೂರ್ತಿಯನ್ನು ನವಧಾನ್ಯಗಳಿಂದ ಭರ್ತಿ ಮಾಡಿ ನೂತನ ಗರ್ಭಗುಡಿ ನಿರ್ಮಾಣ ಕಾರ್ಯ ಮುಗಿಯುವವರೆಗೂ ಭಕ್ತರಿಗೆ ದೇವಿ ದರ್ಶನ ಭಾಗ್ಯವಿಲ್ಲ. ಹೀಗಾಗಿ ಕಾರ್ತಿಕ ಮಾಸದ ಕೊನೆಯ ಮಂಗಳವಾರದಂದು ಶ್ರೀ ಹೊಳಲಮ್ಮದೇವಿ ದರ್ಶನ ಪಡೆಯಬೇಕು ಎಂದು ಕಮಿಟಿ ಅಧ್ಯಕ್ಷ ದಾಮೋಜಿ ತೆಗ್ಗಿಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net