

ಹೊಳಲ್ಕೆರೆ: ಕರೊನಾ ವೈರಸ್ ಪರಿಣಾಮ ಸರ್ಕಾರದ ಆದೇಶದಂತೆ ತಾಲೂಕಿನ ಹೊರಕೆರೆ ದೇವರಪುರದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇಗುಲದಲ್ಲಿ ಪ್ರತಿ ಶನಿವಾರ ನಡೆಯುತ್ತಿದ್ದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಮೂರು ವಾರಗಳ ಕಾಲ ನಿಲ್ಲಿಸಲಾಗಿದೆ ಎಂದು ದೇವಾಲಯ ಟ್ರಸ್ಟ್ ಅಧ್ಯಕ್ಷ ಎಚ್.ಡಿ.ರಂಗಯ್ಯ ತಿಳಿಸಿದರು.
ಎಚ್.ಡಿ.ಪುರದಲ್ಲಿ ಮಂಗಳವಾರ ದೇವಾಲಯ ಟ್ರಸ್ಟ್ ಸದಸ್ಯರು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ದೇಗುಲದಲ್ಲಿ ಪ್ರತಿ ಶನಿವಾರ ಶ್ರೀಸ್ವಾಮಿಗೆ ವಿಶೇಷ ಪೂಜೆ ನಡೆಯುವ ಕಾರಣ ಬರುವ ಭಕ್ತರ ಅನುಕೂಲಕ್ಕಾಗಿ ಟ್ರಸ್ಟ್ ವತಿಯಿಂದ ಪ್ರತಿ ಅನ್ನಸಂತರ್ಪಣೆ ನಡೆಸಲಾಗುತ್ತಿತ್ತು. ಈಗ ಸರ್ಕಾರದ ಆದೇಶದಿಂದಾಗಿ ಮಾ.21, 28 ಹಾಗೂ ಏ.4 ಈ ಮೂರು ಶನಿವಾರ ಅನ್ನಸಂತರ್ಪಣೆ ಸೇವೆ ನಿಲ್ಲಿಸಲಾಗಿದೆ ಎಂದು ತಿಳಿಸಿದರು.
ಪೂಜಾ ಕೈಂಕರ್ಯ ಹೊರತುಪಡಿಸಿ ಮದುವೆ, ನಾಮಕರಣ, ಮುಡಿ ತೆಗೆಸುವುದು, ಉತ್ಸವ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನೂ ಸ್ಥಗಿತಗೊಳಿಸಲಾಗಿದೆ. ಶ್ರೀಸ್ವಾಮಿಯ ಭಕ್ತರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಕರೆಕಲ್ಲು ಬೆಟ್ಟದಲ್ಲೂ ಸ್ಥಗಿತ: ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇಗುಲಕ್ಕೆ ಸಂಬಂಧಿಸಿದ, ಗ್ರಾಮದಿಂದ 3 ಕಿ.ಮೀ. ದೂರವಿರುವ ಕರೆಕಲ್ಲು ಬೆಟ್ಟದಲ್ಲೂ ಪೂಜೆ ಹೊರತು ಬೇರಾವುದೇ ಖಾಸಗಿ ಕಾರ್ಯಕ್ರಮ ನಡೆಸಬಾರದೆಂದು ತೀರ್ಮಾನ ಕೈಗೊಂಡಿದ್ದು ಭಕ್ತರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಟ್ರಸ್ಟ್ ಕಾರ್ಯದರ್ಶಿ ಜಿ.ಎನ್. ಶೇಷಾದ್ರಿ, ಸಹ ಕಾರ್ಯದರ್ಶಿ ಎಚ್.ಎನ್. ರಂಗಯ್ಯ, ಖಜಾಂಚಿ ಸಣ್ಣಸಿದ್ದಪ್ಪ, ನಿರ್ದೇಶಕರಾದ ಜಿ.ಆರ್. ಕೃಷ್ಣಮೂರ್ತಿ, ಸಿ. ಜಯಪ್ಪ, ಡಿ. ಮಹಾಂತೇಶ್, ಎಸ್. ಬಸವರಾಜ್, ಈ. ಮಂಜುನಾಥ್, ಟಿ. ಲಿಂಗರಾಜು, ಮುಖ್ಯ ಅರ್ಚಕ ಕೃಷ್ಣಭಟ್ ಹಾಗೂ ಪದಾಧಿಕಾರಿಗಳಿದ್ದರು.