

ಹೊಳಲ್ಕೆರೆ: ತಾಲೂಕಿನ ಎಲ್ಲ ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ 100 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಬುಧವಾರ 1 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಐತಿಹಾಸಿಕ ಹೊನ್ನಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನಲ್ಲಿ ಸಾಕಷ್ಟು ಕೆರೆಗಳಿದ್ದು, ಎಲ್ಲದರಲ್ಲೂ ಒಂದೊಂದು ಸಮಸ್ಯೆಗಳಿವೆ. ಕೋಡಿ ದುರಸ್ತಿ, ಒತ್ತುವರಿ ತೆರವು, ಜಾಲಿ ತೆರವು, ಹೂಳೆತ್ತುವುದು, ಏರಿ ದುರಸ್ತಿ ಹೀಗಾಗಿ ನಾನಾ ಅಭಿವೃದ್ಧಿ ಕೆಲಸಕ್ಕಾಗಿ ಸರ್ಕಾರ ನೂರು ಕೋಟಿ ರೂ. ಅನುದಾನ ನೀಡಿದೆ ಎಂದು ತಿಳಿಸಿದರು.
ಹೊಳಲ್ಕೆರೆ ಮೂರು ಕೆರೆಗಳ ಅಭಿವೃದ್ಧಿಗೆ 3.5 ಕೋಟಿ ರೂ. ಅನುದಾನ ನೀಡಲಾಗಿದೆ. ಐತಿಹಾಸಿಕ ಹೊನ್ನಕೆರೆ ಹೂಳೆತ್ತಿಸಿ ಇಲ್ಲಿನ ಜನರಿಗೆ ಕುಡಿವ ನೀರು, ತೋಟಗಾರಿಕೆ ಬೆಳೆಗಳು ಮತ್ತು ಅಂತರ್ಜಲ ವೃದ್ಧಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ತಾಲೂಕಿನಲ್ಲಿ ಕೃಷಿ ಆಧಾರಿತ ಭೂಮಿ ಹೆಚ್ಚಿದೆ. ಇದರ ಉತ್ತೇಜನಕ್ಕಾಗಿ ಕೆಂಚಾಪುರ ಕೆರೆ ಕಟ್ಟಲು 1 ಕೋಟಿ ರೂ., ಮಾಳೇನಹಳ್ಳಿ ಹೊಸ ಕೆರೆ ನಿರ್ಮಾಣಕ್ಕೆ 2 ಕೋಟಿ, ಅರೇಹಳ್ಳಿಗೆ ಹೊಸಕೆರೆಗೆ 2 ಕೋಟಿ, ದಾಸರಹಳ್ಳಿಯ ಅಂಜನಾಪುರದ ಕೆರೆಗೆ 2 ಕೋಟಿ, ಹುಳೆಮಳಲಿ ಕೆರೆಗೆ 1 ಕೋಟಿ, ಶಿವಪುರ ಕೆರೆ ಹಾಗೂ ನೀರು ತಡೆ ಗೋಡೆ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಬಿರುಸಾಗಿ ನಡೆಯುತ್ತಿವೆ. 16 ಕೋಟಿ ರೂ. ವೆಚ್ಚದ ಸಾರ್ವಜನಿಕರ ಆಸ್ಪತ್ರೆ ಜತೆಗೆ 14 ಕೋಟಿ ರೂ. ಅನುದಾನದ ಮಕ್ಕಳ ಆಸ್ಪತ್ರೆ ಸಹ ನಿರ್ಮಾಣವಾಗಲಿದೆ. ಶಿಥಿಲ ಎಂಎಂ ಸರ್ಕಾರಿ ಪ್ರೌಢಶಾಲೆ ಹೊಸ ಕಟ್ಟಡ ನಿರ್ಮಾಣಕ್ಕೆ 7.5 ಕೋಟಿ ರೂ. ನೀಡಲಾಗಿದೆ. ಪಪಂ ಕಚೇರಿ ಕಟ್ಟಡಕ್ಕೆ 10 ಕೋಟಿ, ಪಟ್ಟಣದ ರಸ್ತೆಗಳ ವಿಸ್ತರಣೆ ಹಾಗೂ ಫುಟ್‌ಪಾತ್ ನಿರ್ಮಾಣಕ್ಕೆ 11 ಕೋಟಿ ರೂ. ನೀಡಲಾಗಿದೆ ಎಂದು ಹೇಳಿದರು.