ತಾಳಿಕಟ್ಟೆ ಗ್ರಾಮದಲ್ಲಿ ಜಾಗೃತಿ

HLK CORONA 20
Published on

ಹೊಳಲ್ಕೆರೆ: ತಾಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ಕರೊನಾ ತಗುಲಿದ ವಿದ್ಯಾರ್ಥಿನಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರನ್ನು ಬೊಮ್ಮನಕಟ್ಟೆ ಮುರಾರ್ಜಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಹತ್ತು ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ವಿದ್ಯಾರ್ಥಿನಿಯಲ್ಲಿ ಸೋಕು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ. ಗ್ರಾಮದ ಸ್ವಚ್ಛತೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಯಿತು. ತಹಸೀಲ್ದಾರ್ ಕೆ.ನಾಗರಾಜ್, ತಾಲೂಕು ವೈದ್ಯಾಧಿಕಾರಿ ಡಾ.ಜಯಸಿಂಹ ಇದ್ದರು.

ಯುವತಿಯ ಮನೆ ಹೊಸದುರ್ಗ ಮತ್ತು ಚನ್ನಗಿರಿ ಮಾರ್ಗದ ಮುಖ್ಯ ರಸ್ತೆಯಲ್ಲಿದ್ದು, ಬ್ಯಾರಿಕೇಡ್‌ಗಳಿಂದ ಲಾಕ್ ಮಾಡಲಾಗಿದೆ. 100 ಮೀಟರ್ ಅಂತರದಲ್ಲಿ ಹೈಪೊಕ್ಲೋರೈಡ್ ದ್ರಾವಣ ಸಿಂಪಡಣೆ ಮಾಡಿಸಿ ಎಚ್ಚರಿಕೆ ವಹಿಸಲಾಗಿದೆ. ಮನೆಯಿಂದ ಒಂದು ಕಿಮೀ ವ್ಯಾಪ್ತಿಯನ್ನು ಕಂಟೇನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ.

ಆತಂಕ: ತಾಳಿಕಟ್ಟೆ ಗ್ರಾಮ ಚನ್ನಗಿರಿ ಹಾಗೂ ಹೊಳಲ್ಕೆರೆ ತಾಲೂಕಿನ ಗಡಿ ಭಾಗದಲ್ಲಿದ್ದು, ಇಲ್ಲಿಗೆ ಚನ್ನಗಿರಿ ತಾಲೂಕಿನ ಜನತೆಯ ಒಡನಾಟ ಹೆಚ್ಚಾಗಿದೆ. ಚನ್ನಗಿರಿ ತಾಲೂಕಿನಲ್ಲಿ ಹೋಟೆಲ್‌ಗಳು ಬಂದ್ ಆಗಿರುವ ಕಾರಣ ತಾಳಿಕಟ್ಟೆಗೆ ಹೆಚ್ಚು ಜನರು ಆಗಮಿಸುತ್ತಿದ್ದರು. ಈ ಗ್ರಾಮದಿಂದ ಕೂಲಿ ಕಾರ್ಮಿಕರು ಕೂಡ ಚನ್ನಗಿರಿ ತಾಲೂಕಿಗೆ ಹೋಗುತ್ತಿದ್ದರು. ಇದರಿಂದಾಗಿ ದಾವಣಗೆರೆಯ ಸೋಂಕು ತಗಲಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net