ಹಾಸ್ಟೆಲ್‌ಗಳ ಸಮಸ್ಯೆ ಬಿಚ್ಚಿಟ್ಟ ಇಒ

HLK TP 16
Published on

ಹೊಳಲ್ಕೆರೆ: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ತಾಲೂಕಿನ ವಿವಿಧ ಹಾಸ್ಟೆಲ್‌ನಲ್ಲಿ ಹಲವು ಸಮಸ್ಯೆಗಳ ಕುರಿತು ಇಒ ತಾರಾನಾಥ್ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಎಳೆ ಎಳೆಯಾಗಿ ವಿವರಿಸಿದರು.

ಪಟ್ಟಣದಲ್ಲಿರುವ ಎರಡು ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿದಾಗ ಅಲ್ಲಿ ಕಂಡ ಲೋಪದೋಷಗಳ ಪಟ್ಟಿಯನ್ನು ಸಭೆಯಲ್ಲಿ ವಿವರಿಸಿದರು.

ಅಡುಗೆ ಕೊಣೆಯಲ್ಲಿ ಶುಚಿತ್ವ ಇಲ್ಲ. ಅಡುಗೆ ಪರಿಕರಗಳನ್ನು ಸ್ವಚ್ಛ ಮಾಡಿ ಎಷ್ಟೋ ದಿನಗಳಾಗಿವೆ. 80 ವಿದ್ಯಾರ್ಥಿನಿಯರಿರುವ ಹಾಸ್ಟೆಲ್‌ನಲ್ಲಿ ವಾರ್ಡನ್ ಗೈರಾಗಿದ್ದರು. ಶುದ್ಧ ಕುಡಿವ ನೀರಿಲ್ಲ. ಕೊಠಡಿಗಳಲ್ಲಿ ವಿದ್ಯುತ್ ದೀಪಗಳಿಲ್ಲ. ಕೊಠಡಿಗಳಲ್ಲಿ ಕಸಕಡ್ಡಿಗಳಿಂದ ತುಂಬಿ ದುರ್ವಾಸನೆ ಬೀರುತ್ತಿವೆ ಎಂದು ಸಮಸ್ಯೆ ಬಿಚ್ಚಿಟ್ಟರು.

ಈ ವಿದ್ಯಾರ್ಥಿ ನಿಲಯಗಳಲ್ಲಿ 7 ಜನ ಅಡುಗೆಯವರಲ್ಲಿ ಇಬ್ಬರು ಮಾತ್ರ ಹಾಜರಿದ್ದರು. ರಾತ್ರಿ ಪಾಳಯದಲ್ಲಿ ಕಾವಲುಗಾರರು ಸಹ ಇಲ್ಲ ಎಂದು ಇಒ ಬೇಸರ ವ್ಯಕ್ತಪಡಿಸಿದರು. ಈ ವೇಳೆ ಸಭೆಯಲ್ಲಿ ಹಾಜರಿದ್ದ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್ ಮೌನವಾಗಿದ್ದರು.

ರಂಗವ್ವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಕಳೆದ ಆರು ತಿಂಗಳಿಂದ ಶಾಲೆಗೆ ಬರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ ಎಂದು ದೇವರಾಜ್ ಆರೋಪಿಸಿದರು. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ತಿಳಿಸಿದರು.

ಎಚ್.ಡಿ.ಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಅಲ್ಲಿರುವ ಒಬ್ಬ ನರ್ಸ್ ಕ್ರಾಟ್ರಸ್‌ನಲ್ಲಿ ವಾಸವಿಲ್ಲ. ಹಳ್ಳಿಗಳಿಂದ ಬರುವ ರೋಗಿಗಳನ್ನು ನೋಡುವಷ್ಟು ವ್ಯವಧಾನ ಅವರಿಗೆ ಇಲ್ಲ ಎಂದು ಪರಮೇಶ್ವರಪ್ಪ ಆರೋಪಿಸಿದರು.

ಶಿವಕುಮಾರ್ ಮಾತನಾಡಿ, ಆಡನೂರು ಮತ್ತು ಅಪ್ಪರಸನಹಳ್ಳಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕದ ನೀರಿನ ಸಮಸ್ಯೆಯಿದ್ದು, ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಧಾರವಾಡದಲ್ಲಿ ಕೃಷಿ ಇಲಾಖೆಯಿಂದ ನಡೆಯುವ ಕೃಷಿ ಸಮ್ಮೇಳನಕ್ಕೆ ತಾಲೂಕಿನಿಂದ 50 ರೈತರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸಲು ಸಭೆಯಲ್ಲಿ ತಿಳಿಸಿದರು.

ಕ್ರಿಯಾ ಯೋಜನೆಯಲ್ಲಿ ಅನುಮೋದನೆ ಪಡೆದ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಫೆಬ್ರವರಿ 15ರೊಳಗೆ ಮುಕ್ತಾಯಗೊಳಿಸಬೇಕು ಪರಮೇಶ್ವರಪ್ಪ ಆಗ್ರಹಿಸಿದರು.

ಅಕ್ಷರ ದಾಸೋಹ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂಬ ದೂರುಗಳಿವೆ ಎಂದು ಅಧ್ಯಕ್ಷೆ ಸುಜಾತಾ ಧನಂಜಯ್‌ನಾಯ್ಕ ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಜಯಸಿಂಹ, ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net