ವಾಹನ ಚಾಲಕನ ಬಂಧನಕ್ಕೆ ಖಂಡನೆ

HLK DSS MANAVI 02
Published on

ಹೊಳಲ್ಕೆರೆ: ಪಡಿತರ ಅಕ್ಕಿ ಸಾಗಣೆ ಆಪಾದನೆಯಡಿ ಬಂಧಿಸಿರುವ ವಾಹನ ಚಾಲಕ ಶಿವರಾಜ್ ನಿರಪರಾಧಿಯಾಗಿದ್ದು, ಆತನನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ದಸಂಸ ಕಾರ್ಯಕರ್ತರು ಠಾಣೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಸುಳ್ಳು ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ಮತ್ತು ತಹಸೀಲ್ದಾರ್ ಅವರನ್ನು ಅಪಾನತುಗೊಳಿಸಬೇಕೆಂದು ಆಗ್ರಹಿಸಿದರು.

ಚಾಲಕ ಶಿವರಾಜ್ ಸ್ವಂತ ಟಾಟಾ ಏಸ್ ವಾಹನ ಹೊಂದಿದ್ದು, ಬಾಡಿಗೆಗೆ ಸರಕು ಸಾಗಣೆ ಮಾಡುತ್ತಾನೆ. ಪಟ್ಟಣದ ಅಕ್ಕಿ ವ್ಯಾಪಾರಿಯೊಬ್ಬರು ತಮ್ಮ ಅಂಗಡಿಯಿಂದ ಮಲ್ಲಾಡಿಹಳ್ಳಿಗೆ 10 ಚೀಲ ಅಕ್ಕಿ ಸಾಗಿಸಲು ಬಾಡಿಗೆ ಮಾತಾಡಿ ಕಳುಹಿಸಿದ್ದಾರೆ. ಮಾರ್ಗ ಮಧ್ಯದಲ್ಲಿ ತಹಸೀಲ್ದಾರ್ ಮತ್ತು ಪಿಎಸ್‌ಐ ವಾಹನ ತಡೆದು ತಪಾಸಣೆ ನಡೆಸಿದಾಗ ಪಡಿತರ ಚೀಟಿ ಅಕ್ಕಿ ಚೀಲಗಳು ಪತ್ತೆಯಾಗಿವೆ. ಇದರಲ್ಲಿರುವ ಅಕ್ಕಿಗೂ ಬಂಧಿಯಾಗಿರುವ ಚಾಲಕ ಶಿವರಾಜ್‌ಗೂ ಯಾವುದೇ ಸಂಬಂಧವಿಲ್ಲ. ಕೂಡಲೇ ಆತನನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳನ್ನು ಅಮಾನತು ಮಾಡದಿದ್ದಲ್ಲಿ ಮುಂದಿನ ಸೋಮವಾರ ಸಂಘಟನೆಯಿಂದ ಪೊಲೀಸ್ ಠಾಣೆ ಎದುರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿ ಡಿವೈಎಸ್‌ಪಿ ಪಾಂಡುರಂಗ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆ ರಾಜ್ಯ ಸಂಚಾಲಕ ಡಿ.ಆರ್.ಪಾಂಡುರಂಗ ಸ್ವಾಮಿ, ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ, ಚಿಕ್ಕಂದವಾಡಿ ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net