ಒಗ್ಗಟ್ಟಿನಿಂದ ಸಮುದಾಯ ಪ್ರಗತಿ

HLK MADARA CHANNAYA 12
Published on

ಹೊಳಲ್ಕೆರೆ: ಮಾದಾರ ಚನ್ನಯ್ಯ, ಮಾದಾರ ದೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಅವರು ವಚನ, ಕಾಯಕದ ಮೂಲಕ ಆದರ್ಶರಾಗಿದ್ದರು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಆರ್.ಪಾಂಡುರಂಗಸ್ವಾಮಿ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಬಯಲು ರಂಗಮಂದಿರದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಸಮಿತಿ ಹಮ್ಮಿಕೊಂಡಿದ್ದ ದಲಿತ ವಚನಕಾರ ಜಯಂತ್ಯುತ್ಸವದಲ್ಲಿ ಮಾತನಾಡಿ, ವಚನಕಾರರ ಜೀವನ ತತ್ವಾದರ್ಶ ಅನುಸರಿಸಿದರೆ ಉನ್ನತ ಸ್ಥಾನ ಲಭಿಸಲಿದೆ ಎಂದರು.

ಸಮುದಾಯದ ಮುಖಂಡರು ಮಹಾತ್ಮರ ಜೀವನ ಚರಿತ್ರೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಅವರ ಬಗೆಗಿನ ಪುಸ್ತಕಗಳನ್ನು ಆಳವಾಗಿ ಓದಿ ತಿಳಿಯಬೇಕು. ಕೇವಲ ಮೊಬೈಲ್‌ನಲ್ಲಿ ಕಾಲಹರಣ ಮಾಡಬಾರದು ಎಂದು ತಿಳಿಸಿದರು.

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತನ್ನು ನೆನಪಿನಲ್ಲಿ ಇಟ್ಟುಕೊಂಡು ಎಲ್ಲರೂ ಒಂದಾಗಿರಬೇಕು. ಸಮುದಾಯ ಮತ್ತು ನಮ್ಮವರಿಗೆ ಅನ್ಯಾಯವಾದಾಗ ಎಲ್ಲರೂ ಒಂದಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.

ಎಲ್ಲ ಸಮುದಾಯಗಳ ಜನರೊಂದಿಗೆ ಪ್ರೀತಿ, ವಿಶ್ವಾಸದಿಂದ ಇರಬೇಕು. ಯಾರನ್ನು ಮತ್ತು ಯಾವ ಸಮಾಜವನ್ನು ದ್ವೇಷದಿಂದ ನೋಡಬಾರದು. ನಮ್ಮ ಹಕ್ಕುಗಳಿಗಾಗಿ ಹೋರಾಟ ಅಗತ್ಯ ಎಂದರು.

ತಹಸೀಲ್ದಾರ್ ಕೆ.ನಾಗರಾಜ್ ಮಾತನಾಡಿದರು. ದಸಂಸ ತಾಲೂಕಾಧ್ಯಕ್ಷ ಮಂಜುನಾಥ್, ಸರ್ಕಾರಿ ಮುಖ್ಯಶಿಕ್ಷಕರ ಗೌರವಾಧ್ಯಕ್ಷ ಟಿ.ವರದರಾಜ್ ಉಪಸ್ಥಿತರಿದ್ದರು.

ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಟಿ.ತಿಪ್ಪೇಸ್ವಾಮಿ, ಚಿಕ್ಕಗೊಂಡನಹಳ್ಳಿಯ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ವಸಂತಕುಮಾರ್ ಉಪನ್ಯಾಸ ನೀಡಿದರು.

ಮುಖಂಡರಾದ ಟಿ.ಬಸವರಾಜಪ್ಪ ವಿಶ್ವನಾಥನಹಳ್ಳಿ, ಟಿ.ಕಸ್ತೂರಪ್ಪ ಘಟ್ಟಿಹೊಸಹಳ್ಳಿ, ಆರ್.ಶಿವಕುಮಾರ್ ರಂಗಾಪುರ ಅವರನ್ನು ಸನ್ಮಾನಿಸಲಾಯಿತು. ಕಸಾಪ ಮಾಜಿ ಅಧ್ಯಕ್ಷ ಕೆ.ಬಿ.ಬಸವರಾಜಯ್ಯ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net