ಕಲ್ಲಗಣಿಗಾರಿಕೆ ವಿರುದ್ಧ ಸಿಡಿದೆದ್ದ ರೈತರು

HLK RAITHA 11 (1)
Published on

ಹೊಳಲ್ಕೆರೆ: ಕೃಷಿ ಭೂಮಿ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಡೆಸಲು ನೀಡಿರುವ ಪರವಾನಗಿಯನ್ನು ತಕ್ಷಣವೇ ರದ್ದತಿಗೆ ಆಗ್ರಹಿಸಿ ತಾಲೂಕಿನ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ತಾಲೂಕು ರೈತ ಸಂಘ ಕಾರ್ಯಕರ್ತರು ಕೈಗೊಂಡಿದ್ದ ಡಿಸಿ ಕಚೇರಿ ಮುತ್ತಿಗೆ ಹಾಕುವ ಪಾದಯಾತ್ರೆಯನ್ನು ತಾಲೂಕು ಆಡಳಿತ ತಡೆದಿದ್ದರಿಂದ ಪಟ್ಟಣದ ಗಣಪತಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಅವೈಜ್ಞಾನಿಕ, ರೈತ ವಿರೋಧಿ ನೀತಿಗಳನ್ನು ತೀವ್ರವಾಗಿ ಖಂಡಿಸಿದರು.

ತಾಲೂಕಿನ ಟಿಎಮ್ಮಿಗನೂರು, ಆಡನೂರು, ಮೇಕೆನಹಟ್ಟಿ, ಅರಸನಘಟ್ಟ, ಪಾಡಿಗಟ್ಟೆ, ಮದ್ದೆನಹಳ್ಳಿ, ಅಪ್ಪರಸನಹಳ್ಳಿ, ದಾಸರಹಳ್ಳಿ, ಚನ್ನಪಟ್ಟಣ ಮತ್ತಿತರ ಹಳ್ಳಿಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಕೃಷಿ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಗಣಿಗಾರಿಕೆಯಲ್ಲಿ ಬಳಸುವ ಸ್ಫೋಟಕದಿಂದ ಕೆರೆ, ಕಟ್ಟೆಗಳ ಏರಿ, ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ. ಅಂತರ್ಜಲ ಕುಸಿಯುತ್ತಿದೆ. ಕೃಷಿ ಚಟುವಟಿಕೆಗಳಿಗೆ ಧಕ್ಕೆಯಾಗುತ್ತಿದೆ. ಆದ್ದರಿಂದ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

ತಹಸೀಲ್ದಾರ್ ವಿರುದ್ಧ ಆಕ್ರೋಶ: ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕೆ.ನಾಗರಾಜ್ ಅವರು ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ತಾತ್ಸಾರ ತೋರಿದ್ದರಿಂದ ಆಕ್ರೋಶಗೊಂಡ ರೈತರು ತಹಸೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿದರು. ತಕ್ಷಣವೇ ಅವರನ್ನು ಅಮಾನತುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.

ರೈತ ಸಂಘಟನೆಗಳ ಮುಖಂಡರಾದ ಈಚಘಟ್ಟದ ಸಿದ್ದವೀರಪ್ಪ, ಬಸವರಾಜಪ್ಪ, ಲೋಕೇಶ್, ಅಜಯ್, ಡಿ.ಮಲ್ಲಿಕಾರ್ಜುನ್, ಕೆ.ರೇವಣಸಿದ್ದಪ್ಪ, ಕೆ.ಮೋಹನ್‌ಕುಮಾರ್ ಇತರರಿದ್ದರು.

ರೈತಸಂಘದ ಬೇಡಿಕೆಗಳು
ಎಲ್ಲ ವಿವಿಧ ಗಣಿಗಾರಿಕೆ ಪರವಾನಗಿಗಳನ್ನು ರದ್ದುಗೊಳಿಸಬೇಕು.
ನಿಯಮ ಉಲ್ಲಂಘಿಸಿ ಗಣಿಗಾರಿಕೆಗೆ ಅನುಮತಿ ನೀಡಿರುವ ಅಧಿಕಾರಿಗಳು, ನೌಕರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಪ್ರಾಕೃತಿಕ, ಸಾಮಾಜಿಕ ಹೊಣೆಗಾರಿಕೆ ಮತ್ತು ಪುರ್ನಶ್ಚೇತನ ಕಾರ್ಯಕ್ರಮ ಪೂರ್ಣಗೊಳಿಸಬೇಕು.
ಗಣಿಗಾರಿಕೆ ಬಾಧಿತ ಹಳ್ಳಿಗಳ ಅಭಿವೃದ್ಧಿಗೆ ಕ್ರಮ ಕೈಗೋಳ್ಳಬೇಕು.
ಗುತ್ತಿಗೆ ಕೊಡುವ ಮುನ್ನ ಸುತ್ತಲಿನ ಹಳ್ಳಿಗಳ ಜನರ ಒಪ್ಪಿಗೆ ಪಡೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net