

ಹೊಳಲ್ಕೆರೆ: ಕಾಯಕ ತತ್ವದಿಂದ ಸಮಸಮಾಜ ನಿರ್ಮಾಣ ಸಾಧ್ಯವೆಂದು ಸಾರಿದ ಜಗಜ್ಯೋತಿ ಬಸವೇಶ್ವರ ಚಿಂತನೆಗಳನ್ನು ಪ್ರತಿಯೊಬ್ಬರೂ ಬದುಕಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ನ್ಯಾಯವಾದಿ ಎಸ್.ವೇದಮೂರ್ತಿ ತಿಳಿಸಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಬಸವೇಶ್ವರ ಜಯಂತಿಯಲ್ಲಿ ಮಾತನಾಡಿ, ಬಸವಣ್ಣ 12ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಿಸಿ ಜಾತಿ-ಧರ್ಮ ಒಗ್ಗೂಡಿಕೆಗೆ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ಪಪಂ ಸದಸ್ಯ ಪಿ.ಎಚ್.ಮುರುಗೇಶ ಮಾತನಾಡಿ, ಆಗಿನ ಕಾಲಕ್ಕೆ ಅನುಭವ ಮಂಟಪವೇ ಸಂಸತ್ ಆಗಿತ್ತು. ಇಲ್ಲಿ ಸೇರುತ್ತಿದ್ದ ಶಿವ ಶರಣರೆಲ್ಲರ ವಿಚಾರಧಾರೆಯಿಂದಲೇ ಸಮ ಸಮಾಜ ನಿರ್ಮಾಣ ಸಾಧ್ಯವಾಯಿತು ಎಂದರು.
ಪಪಂ ಸದಸ್ಯರಾದ ಬಿ.ಎಸ್.ರುದ್ರಪ್ಪ ಮಾತನಾಡಿ, ಬಸವಣ್ಣ ಒಂದು ಧರ್ಮಕ್ಕೆ ಸೀಮಿತವಲ್ಲ. ಅವರು ವಿಶ್ವದ ಆಸ್ತಿ ಎಂದು ತಿಳಿಸಿದರು.
ಮುಖ್ಯಾಧಿಕಾರಿ ಎ.ವಾಸಿಂ, ಪಪಂ ಸದಸ್ಯರಾದ ಕೆ.ಸಿ.ರಮೇಶ್, ಅಶೋಕ್, ವಿಜಯ್, ಮಲ್ಲಿಕಾರ್ಜುನ್, ವಿಜಯಸಿಂಹ, ಸೈಯದ್ ಸಜೀಲ್, ಸೈಯದ್‌ಮನ್ಸೂರ್, ಸುಧಾ ಬಸವರಾಜ್, ಆರೋಗ್ಯಾಧಿಕಾರಿ ಪರಮೇಶ್ವರಪ್ಪ, ಕಿಶೋರ್, ಮಹೇಶ್ ಇದ್ದರು.