

ಹೊಳಲ್ಕೆರೆ: ರಾಮಗಿರಿ ರೈಲ್ವೆ ನಿಲ್ದಾಣದಲ್ಲಿ ವಿಶ್ವಮಾನವ, ಶಿವಮೊಗ್ಗ-ತಿರುಪತಿ, ವಾಸ್ಕೋ ಎಕ್ಸ್‌ಪ್ರೆಸ್ ರೈಲು ಗಾಡಿಗಳನ್ನು ನಿಲುಗಡೆ ಮಾಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಹುಬ್ಬಳ್ಳಿ ನೈರುತ್ಯ ವಲಯದ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.
ಸ್ಥಳೀಯ ನಿವಾಸಿ ಡಾ.ಎಚ್.ಪಿ.ನಿಜಗುಣಸ್ವಾಮಿ ಮಾತನಾಡಿ, ರಾಮಗಿರಿ ಕರಿಸಿದ್ದೇಶ್ವರಸ್ವಾಮಿ ನೆಲೆಸಿರುವ ಐತಿಹಾಸಿಕ ಪುಣ್ಯಕ್ಷೇತ್ರ. ಇಲ್ಲಿಗೆ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ತುಮಕೂರು, ಶಿವಮೊಗ್ಗ ಅಲ್ಲದೆ ರಾಜ್ಯದ ನಾನಾ ಜಿಲ್ಲೆಗಳ ಭಕ್ತರು ಬರುತ್ತಾರೆ. ಇದು ಹೋಬಳಿ ಕೇಂದ್ರವೂ ಆಗಿದೆ. ಇಲ್ಲಿನ ರೈಲು ನಿಲ್ದಾಣ 30ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕೇಂದ್ರವಾಗಿದೆ. ಇಷ್ಟೆಲ್ಲ ಅಗತ್ಯತೆ ಇದ್ದರೂ ಯಾವುದೇ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಮಾಡುತ್ತಿಲ್ಲ. ಇದರಿಂದ ಭಕ್ತರು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗಿದೆ. ಕೂಡಲೇ ವಿಶ್ವಮಾನವ, ತಿರುಪತಿ ಎಕ್ಸ್‌ಪ್ರೆಸ್, ವಾಸ್ಕೋ ಈ ಮೂರು ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಪ್ರತಿಕ್ರಿಯಿಸಿ ಸಿಂಗ್, ಇಲ್ಲಿನ ರೈಲು ನಿಲ್ದಾಣ ಸುಸಜ್ಜಿತ ಹಾಗೂ ಉತ್ತಮ ವಾತಾವರಣ ಹೊಂದಿದೆ. ಇಲ್ಲಿಗೆ ಮೂರು ಎಕ್ಸ್‌ಪ್ರೆಸ್ ರೈಲು ನಿಲುಗಡೆ ಕಷ್ಟ. ಸದ್ಯಕ್ಕೆ ವಿಶ್ವ ಮಾನವ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸ್ಥಳೀಯ ಸಂಸದ ಎ.ನಾರಾಯಣಸ್ವಾಮಿ ಅವರ ಕೋರಿಕೆ ಅಗತ್ಯವಿದ್ದು, ಅವರೂ ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಿ ಎಂದರು.
ರೈಲ್ವೆ ನಿಲ್ದಾಣದಲ್ಲಿ ರಾಮಗಿರಿ ಹಾಗೂ ಶ್ರೀ ಕರಿಸಿದ್ದೇಶ್ವರಸ್ವಾಮಿ ದೇವಾಲಯ ಬಗ್ಗೆ ಹಾಕಲಾಗಿದ್ದ ಮಾಹಿತಿಯನ್ನು ಜಿಎಂ ಸಂಪೂರ್ಣ ಓದಿ ಖುಷಿ ಪಟ್ಟರು. ಪಾರ್ಕ್ ಹಾಗೂ ಶ್ರೀಕೃಷ್ಣ ಪ್ರತಿಮೆ ಉದ್ಘಾಟಿಸಿದರು.
ಮೈಸೂರು ಡಿವಿಜನಲ್ ಅಪರ್ಣಾ ಗರಗ್, ನೈರುತ್ಯ ರೈಲ್ವೆ ವಲಯದ ಹರಿಶಂಕರ್ ವರ್ಮ, ಶಿವರಾಜ್ ಸಿಂಗ್, ಗ್ರಾಪಂ ಅಧ್ಯಕ್ಷ ಆರ್.ಶಿವಕುಮಾರ್, ಮುಖಂಡ ರಾಮಣ್ಣ, ತಾಪಂ ಸದಸ್ಯ ಡಿ.ಬಿ.ಕುಮಾರ್, ಪ್ರಫುಲ್ಲ ನಿಜಗುಣಸ್ವಾಮಿ, ಜಗದೀಶ್ ಪಾಳೇಗಾರ್, ಷಡಕ್ಷರಿ ದೇವ, ರಾಮಗಿರಿ ಹಾಗೂ ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ಫ್ಲೈ ಓವರ್ ವೀಕ್ಷಿಸದ ಜಿಎಂ: ಇಡೀ ರೈಲ್ವೆ ನಿಲ್ದಾಣವನ್ನು ಅಜಯ್ ಕುಮಾರ್ ಸಿಂಗ್ ವೀಕ್ಷಿಸಿದರು. ಇದರ ಬಳಿಯೇ ನಿರ್ಮಿಸಿರುವ ಮೇಲು ಸೇತುವೆ ಕಳಪೆ ಕಾಮಗಾರಿ ಕುರಿತು ಗ್ರಾಮಸ್ಥರು ದೂರು ಸಲ್ಲಿಸಿದರು. ಸಮಯದ ಅಭಾವದಿಂದ ಫ್ಲೈ ಓವರ್ ವೀಕ್ಷಿಸದೆ ತೆರಳಿದ ಅವರು, ಸ್ಥಳದಲ್ಲಿದ್ದ ಇಂಜಿನಿಯರ್‌ಗೆ ಕಳಪೆ ಕಾಮಗಾರಿ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.