ಅಹಿಂಸೆ ಬೋಧಿಸಿದ ಸೇವಾಲಾಲ್

HLK SEVALAL 24
Published on

ಹೊಳಲ್ಕೆರೆ: ಸತ್ಯ, ಅಹಿಂಸೆ ಬೋಧಿಸಿದ ಸಂತ ಸೇವಾಲಾಲ್, ಸಮಾಜದ ಉದ್ಘಾರಕ್ಕಾಗಿ ಉದಯಿಸಿದ ದೈವಿ ಪುರುಷ ಎಂದು ಮಾಜಿ ಸಚಿವ, ಹೂವಿನ ಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಸಂತ ಸೇವಾಲಾಲ್ ಮಹಾರಾಜರ 281ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂತ ಸೇವಾಲಾಲ್‌ರು ಬಂಜಾರ ಸಮಾಜದ ಪವಾಡ ಪುರುಷ. ಸಮಾಜದಲ್ಲಿನ ಮೌಢ್ಯತೆ ತೊಡೆದು ಹಾಕಿದ ಮಹಾನ್ ಸಂತ ಎಂದು ಬಣ್ಣಿಸಿದರು.

ಮಕ್ಕಳಿಗಾಗಿ ಯಾವುದೇ ಆಸ್ತಿ ಮಾಡಬೇಡಿ, ಅವರಿಗೆ ಉನ್ನತ ಶಿಕ್ಷಣ ಕೊಡಿಸಿ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು. ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳ ಜತೆಗೆ ನಿಗಮ ಮಂಡಳಿಗಳನ್ನೂ ಸ್ಥಾಪಿಸಿ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಕಲಿಯಬೇಕು, ಕಲಿತದ್ದನ್ನು ಇತರರಿಗೂ ತಿಳಿಸಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವ ಉಧಾರತೆ ಬೆಳೆಸಿಕೊಳ್ಳಬೇಕು. ಇದು ಸಂತ ಸೇವಾಲಾಲ್ ಅವರ ತತ್ವ. ಇದನ್ನು ಯಾರು ಅನುಸರಿಸುತ್ತಾರೋ ಅವರ ಬದುಕು ಹಸನಾಗುತ್ತದೆ ಎಂದರು.

ಜಿಪಂ ಅಧ್ಯಕ್ಷ ನಾಗೇಂದ್ರನಾಯ್ಕ, ಮಾಜಿ ಶಾಸಕ ಎ.ವಿ.ಉಮಾಪತಿ, ಸಮಾವೇಶದ ಅಧ್ಯಕ್ಷ ಕೆ.ಆರ್.ಈಶ್ವರ್ ನಾಯ್ಕ, ತಾಲೂಕು ಅಧ್ಯಕ್ಷ ಕುಮಾರ್‌ನಾಯ್ಕ, ಮುಖಂಡರಾದ ದೇವೆಂದ್ರನಾಯ್ಕ, ಪಪಂ ಸದಸ್ಯರಾದ ಸೈಯದ್ ಸಜೀಲ್, ಬಿ.ಎಸ್.ರುದ್ರಪ್ಪ, ತಹಸೀಲ್ದಾರ್ ಕೆ.ನಾಗರಾಜ್ ಮತ್ತಿತರರಿದ್ದರು.

ಅದ್ದೂರಿ ಮೆರವಣಿಗೆ: ಬೆಳಗ್ಗೆ 11ಕ್ಕೆ ಪಟ್ಟಣದ ಟೋಲ್‌ಗೇಟ್‌ನಿಂದ ಪ್ರಮುಖ ಬೀದಿಗಳಲ್ಲಿ ಸಂತ ಸೇವಾಲಾಲ್ ಹಾಗೂ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಿತು. ನಗಾರ, ತೀಜ್, ಡೊಳ್ಳು ಕುಣಿತ, ಡಿ.ಜೆ ಮತ್ತಿತರ ಕಲಾ ತಂಡಗಳು ಗಮನಸೆಳೆದವು. ಸರಿಗಮಪ ಸ್ಪರ್ಧೆ ರನ್ನರ್ ಅಪ್ ಹನುಮಂತನನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಜನ ಮುಗಿಬಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net