

ಹೊಳಲ್ಕೆರೆ: ಆಡಿಟೋರಿಯಂ ನಿರ್ಮಾಣದ ನೆಪದಲ್ಲಿ ಅಂಬೇಡ್ಕರ್ ಬಯಲು ರಂಗಮಂದಿರವನ್ನು ವಿರೂಪಗೊಳಿಸುವ ಪ್ರಯತ್ನ ಸರಿಯಲ್ಲ. ತಕ್ಷಣವೇ ಅಭಿವೃದ್ಧಿ ಕಾಮಗಾರಿ ನಿಲ್ಲಿಸಬೇಕೆಂದು ಆಗ್ರಹಿಸಿ ದಸಂಸ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹೃದಯ ಭಾಗದಲ್ಲಿರುವ ರಂಗಮಂದಿರವನ್ನು ಆಡಿಟೋರಿಯಂ ಮಾಡಲು ಅವಕಾಶ ನೀಡುವುದಿಲ್ಲ. ಹಲವು ವರ್ಷಗಳಿಂದ ಬಯಲು ರಂಗಮಂದಿರ ಸಾರ್ವಜನಿಕ ಕಾರ್ಯಕ್ರಮ ಕೈಗೊಳ್ಳಲು ಸಹಕಾರಿಯಾಗಿದೆ. ಇದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿಬೇಕೆಂದು ಆಗ್ರಹಿಸಿದರು.
ಬಯಲು ರಂಗಮಂದಿರಕ್ಕೆ ಸೂಕ್ತ ರಕ್ಷಣೆ ಇಲ್ಲದೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ವಾಹನಗಳು, ಬಿಡಾಡಿ ದನಗಳು ಇಲ್ಲಿ ಬೀಡುಬಿಟ್ಟಿರುತ್ತವೆ. ಘನತ್ಯಾಜ್ಯ ಸಂಗ್ರಹವಾಗಿ ಸಾರ್ವಜನಿಕರ ಉಪಯೋಗಕ್ಕೆ ಬರದಂಥಹ ವ್ಯವಸ್ಥೆ ನಿರ್ಮಾಣವಾಗಿದೆ. ತಕ್ಷಣವೇ ರಂಗಮಂದಿರ ನಿರ್ವಹಣೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.