ಕಳೆದ ಬಾರಿಗಿಂತ ಹೆಚ್ಚಿನ ಭದ್ರತೆ

HLK HD PURA 08
Published on

ಹೊಳಲ್ಕೆರೆ: ಎಚ್.ಡಿ.ಪುರದಲ್ಲಿ ಮಾ.9ರಂದು ಜರುಗಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ತಾಲೂಕು ಆಡಳಿತ ಹಾಗೂ ದೇವಾಲಯ ಟ್ರಸ್ಟ್ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಹಸೀಲ್ದಾರ್ ನಾಗರಾಜ್ ತಿಳಿಸಿದರು.

ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಜಾತ್ರಾ ಸಿದ್ಧತಾ ಕಾರ್ಯ ಪರಿಶೀಲಿಸಿ ಮಾತನಾಡಿದ ಅವರು, ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ಅಗತ್ಯ ಸಿದ್ಧತೆ ಕೈಗೊಳ್ಳಲು ಸಮಿತಿ ರಚಿಸಲಾಗಿದೆ. ಹಾಗೆಯೇ ಕುಡಿವ ನೀರು, ಸ್ವಚ್ಛತೆ, ಭದ್ರತೆಗೂ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಈವರೆಗೆ ಬ್ರಹ್ಮ ರಥೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ. ಕಳೆದ ಬಾರಿಗಿಂತ ಈ ಸಲ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಕಂದಾಯ ಇಲಾಖೆಯ 30ಕ್ಕೂ ಹೆಚ್ಚು ಸಿಬ್ಬಂದಿ ದೇವಾಲಯ ಕಾರ್ಯದಲ್ಲಿ ತೊಡಗಲಿದ್ದಾರೆ. ಅಗತ್ಯವಿದ್ದಲ್ಲಿ ಇನ್ನಷ್ಟು ಸಿಬ್ಬಂದಿ ಒದಗಿಸಲು ಸಿದ್ಧ್ದರಿದ್ದೇವೆ ಎಂದು ತಿಳಿಸಿದರು.

ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಎಚ್.ಡಿ.ರಂಗಯ್ಯ ಮಾತನಾಡಿ, ಮುಜರಾಯಿ ಇಲಾಖೆಗೆ ಅತಿ ಹೆಚ್ಚು ಆದಾಯ ತರುವ ದೇವಾಲಯ ಇದಾಗಿದೆ. ಈ ಬಾರಿಯ ಬ್ರಹ್ಮ ರಥೋತ್ಸವಕ್ಕೆ 1 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದ್ದು, ಹೆಚ್ಚಿನ ಭದ್ರತೆ ಕೋರಲಾಗಿದೆ. 100 ಪೊಲೀಸ್ ಸಿಬ್ಬಂದಿ ನಿಯೋಜಿಸಿರುವುದಾಗಿ ಚಿತ್ರಹಳ್ಳಿ ಪಿಎಸ್‌ಐ ಮಂಜುನಾಥ್ ತಿಳಿಸಿದ್ದಾರೆ ಎಂದರು.

ಟ್ರಸ್ಟ್‌ನ ಕಾರ್ಯದರ್ಶಿ ಜಿ.ಎನ್.ಶೇಷಾದ್ರಿ, ಖಜಾಂಚಿ ಜಿ. ಸಣ್ಣ ಸಿದ್ದಪ್ಪ, ಧರ್ಮದರ್ಶಿ ಎಚ್. ಆನಂದ್, ಲಿಂಗರಾಜು, ಕಂದಾಯ ನಿರೀಕ್ಷಕ ಎನ್. ಮಂಜುನಾಥ್, ಟ್ರಸ್ಟ್ ಪದಾಧಿಕಾರಿಗಳು, ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net