

ಹೊಳಲ್ಕೆರೆ: ಕೊಟ್ಟಿಗೆ ಗೊಬ್ಬರ ಬಳಸಿ ಭೂಮಿ ಫಲವತ್ತತೆ ಕಾಯ್ದುಕೊಳ್ಳಬೇಕು ಎಂದು ರೈತರಿಗೆ ಕೃಷಿ ಇಲಾಖೆ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಟಿ.ಕುಮಾರ್ ಸಲಹೆ ನೀಡಿದರು.
ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ರಾಮಗಿರಿ ಹೋಬಳಿಯ ತಾಳೀಕಟ್ಟೆ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ದ್ವಿದಳ ಧಾನ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಣ್ಣಿನ ಪರೀಕ್ಷೆ ಮಾಡಿಸಿ, ಶಿಫಾರಸು ಆಧಾರದ ಮೇಲೆ ರಸಗೊಬ್ಬರ, ಬಿತ್ತನೆ ಕಾರ್ಯ ಕೈಗೊಂಡರೆ ವೆಚ್ಚ ಕಡಿಮೆ, ಲಾಭ ಹೆಚ್ಚು ಮಾಡಿಕೊಳ್ಳಬೇಕು. ಹೆಚ್ಚಾಗಿ ಹಸಿರೆಲೆ, ಕೊಟ್ಟಿಗೆ, ಎರೆಹುಳು ಗೊಬ್ಬರ ಬಳಸುವುದರಿಂದ ಭೂಮಿಯ ಲವತ್ತತೆ ಹೆಚ್ಚುತ್ತದೆ ಎಂದು ಸಲಹೆ ನೀಡಿದರು.
ತಾಂತ್ರಿಕ ಸಹಾಯಕ ಎಚ್.ಕೆ.ಗೋಪಿಕೃಷ್ಣ ಮಾತನಾಡಿ, ಅಕ್ಕಡಿ ಬೆಳೆ ಬೆಳೆಯುವುದರಿಂದ ವಾತಾವರಣದಲ್ಲಿರುವ ಸಾರಜನಕವನ್ನು ಹೀರಿಕೊಂಡು ಸಸ್ಯಗಳಿಗೆ ಒದಗಿಸುತ್ತವೆ. ಇದು ಸಸ್ಯಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಬೆಳೆಗಳಲ್ಲಿ ಅತೀ ಹೆಚ್ಚು ಪೋಷಕಾಂಶಗಳಿದ್ದು, ಇವುಗಳನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದರು.
ಕೃಷಿ ಅಧಿಕಾರಿ ಆರ್.ವೆಂಕಟೇಶಪ್ಪ ಮಾತನಾಡಿ, ಇಲಾಖೆಯಿಂದ ಶೇ.50ರಷ್ಟು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಲಘು ಪೋಷಕಾಂಶ, ಸ್ಪ್ರೇಯರ್ ಇತರ ಪರಿಗಳನ್ನು ನೀಡಲಾಗುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಾಪಂ ಸದಸ್ಯ ಹಳ್ಳಪ್ಪ ಮಾತನಾಡಿ, ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ಬಳಸಬೇಕು. ರೈತ ಸಂಪರ್ಕ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅಲ್ಲಿ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ನಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಚಿಕ್ಕಪ್ಪ, ಈಶ್ವರಪ್ಪ, ಸಹಾಯಕ ತಾಂತ್ರಿಕ ವ್ಯವಸ್ಥಾಪಕರು, ರೈತ ಅನುವುಗಾರರು, ತಾಳೀಕಟ್ಟೆ ರೈತರು ಹಾಜರಿದ್ದರು.