ಇಂಡಿಯಲ್ಲಿ ಹಂದಿಗೆ ಹಾಗ್ ಕಾಲರಾ

Hog cholera for swine in Indy
ಇಂಡಿ ಪಟ್ಟಣದಲ್ಲಿ ಠಿಕಾಣಿ ಹೂಡುತ್ತಿರುವ ಹಂದಿಗಳ ಸ್ಥಳಗಳಿಗೆ ಭೇಟಿ ನೀಡಿದ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಿ.ಎಚ್. ಕನ್ನೂರ ಸತ್ತು ಬಿದ್ದಿರುವ ಹಂದಿಗಳನ್ನು ಪರೀಕ್ಷಿಸಿದರು.
Published on

ಇಂಡಿ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಠಿಕಾಣಿ ಹೂಡಿರುವ ಹಂದಿಗಳಲ್ಲಿ ಹಂದಿ ಕಾಲರಾ ಅಥವಾ ಹಾಗ್ ಕಾಲರಾ ಕಾಣಿಸಿಕೊಂಡಿದ್ದು, ಇದು ಮಾರಣಾಂತಿಕ ವೈರಸ್ ಕಾಯಿಲೆಯಾಗಿದೆ.

ಇದರಿಂದ ಪಟ್ಟಣದಲ್ಲಿ ಅಲ್ಲಲ್ಲಿ ಹಂದಿಗಳು ಸಾವನ್ನಪ್ಪುತ್ತಿವೆ. ಕಾರಣ ಹಂದಿ ಸಾಕಾಣಿಕೆದಾರರು ತಮ್ಮ ಹಂದಿಗಳನ್ನು ಪಟ್ಟಣದಲ್ಲಿ ಬಿಡಬಾರದು ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಿ.ಎಚ್. ಕನ್ನೂರ ತಿಳಿಸಿದ್ದಾರೆ.

ಹಂದಿ ಸಾಕಾಣಿಕೆದಾರರು ತಮ್ಮ ಹಂದಿಗಳನ್ನು ಒಂದೆಡೆ ಸೇರಿಸಿ ಸಾಕಾಣಿಕೆ ಮಾಡಬೇಕು. ಹಂದಿ ಕಾಲರಾ ವೈರಸ್‌ಗೆ ಔಷಧಿಗಳಿವೆ. ಅವುಗಳನ್ನು ವೈರಸ್‌ನಿಂದ ಬಳಲುತ್ತಿರುವ ಹಂದಿಗಳಿಗೆ ನೀಡಿ ರೋಗ ನಿಯಂತ್ರಿಸಬೇಕು.

ಪಟ್ಟಣದಲ್ಲಿರುವ ಪಶುಪಾಲನಾ ಇಲಾಖೆಗೆ ಭೇಟಿ ನೀಡಿ ಉಚಿತವಾಗಿ ಸಿಗುವ ಔಷಧಿಗಳನ್ನು ತೆಗೆದುಕೊಂಡು ಹೋಗಿ ಜ್ವರ, ಕೆಂಪು ಮತ್ತು ಬರಿದಾಗುತ್ತಿರುವ ಕಣ್ಣು, ವಾಂತಿ, ಮಲಭದ್ದತೆ, ಅತಿಸಾರ, ಕೆಮ್ಮುವುದು, ಉಸಿರಾಟದ ತೊಂದರೆ ಚರ್ಮದಲ್ಲಿ ದದ್ದು ಬೆಳೆಯುತ್ತಿರುವುದು ಮುಂತಾದ ರೋಗ ಲಕ್ಷಣಗಳಿರುವ ಹಂದಿಗಳಿಗೆ ಹಾಕಬೇಕು ಎಂದು ತಿಳಿಸಿದ್ದಾರೆ.

ಹಂದಿ ಕಾಲರಾದಿಂದ ಜನಸಾಮಾನ್ಯರು ಅಂಜುವ ಕಾರಣವಿಲ್ಲ. ಇದು ಕೇವಲ ಹಂದಿಗಳಿಗೆ ಮಾತ್ರ ಹರಡುವ ವೈರಸ್ ಆಗಿದ್ದು, ಮನುಷ್ಯರಿಗೆ ಯಾವದೇ ಅಪಾಯವಿಲ್ಲ. ಪಟ್ಟಣದಲ್ಲಿ ಎಲ್ಲಿಯಾದರೂ ಹಂದಿಗಳು ಸತ್ತು ಬಿದ್ದಿದ್ದರೆ ಕೂಡಲೇ ಪುರಸಭೆಯ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಸತ್ತುಬಿದ್ದಿರುವ ಹಂದಿಗಳನ್ನು ಸಾಗಿಸುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net