ರಸ್ತೆ ದುಸ್ಥಿತಿ ಖಂಡಿಸಿ ಹೊದ್ದೂರು ಜಂಕ್ಷನ್‌ನಲ್ಲಿ ರಸ್ತೆತಡೆ ಪ್ರತಿಭಟನೆ

22mdkd3 - Copy
Published on

ವಿಜಯವಾಣಿ ಸುದ್ದಿಜಾಲ ಮೂರ್ನಾಡು

ಮೂರ್ನಾಡು- ನಾಪೋಕ್ಲು ರಸ್ತೆ ದುಸ್ಥಿತಿ ಖಂಡಿಸಿ ಜೆಡಿ(ಎಸ್) ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ನೇತೃತ್ವದಲ್ಲಿ ಗುರುವಾರ ಹೊದ್ದೂರು ಜಂಕ್ಷನ್‌ನಲ್ಲಿ ರಸ್ತೆತಡೆ ಪ್ರತಿಭಟನೆ ನಡೆಯಿತು. ರಸ್ತೆ ಗುಂಡಿಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.

ಹತ್ತು ದಿನದೊಳಗೆ ರಸ್ತೆ ಗುಂಡಿ ಮುಚ್ಚಲಾಗುವುದು. ಹದಿನೈದು ದಿನದೊಳಗೆ ಡಾಮರೀಕರಣ ಮಾಡಲಾಗುವುದೆಂದು ಸ್ಥಳಕ್ಕೆ ಆಗಮಿಸಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಧ್ರುವರಾಜ್ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

ಒಂದು ವಾರದೊಳಗೆ ರಸ್ತೆ ಕಾಮಗಾರಿ ಮಾಡಬೇಕೆಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಈ ರಸ್ತೆ ಕಾಮಗಾರಿ ಸೇರಿದ್ದಂತೆ ಜಿಲ್ಲೆಯ ೧೪ ರಸ್ತೆ ಕಾಮಗಾರಿ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರ ಕಾಮಗಾರಿ ಮಾಡುತ್ತಿಲ್ಲ. ಎಲ್ಲಾ ಕಾಮಗಾರಿ ರದ್ದು ಪಡಿಸಿ, ಹೊಸದಾಗಿ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತಿದೆ. ಶುಕ್ರವಾರದಿಂದ ಕೊಡಂಗೇರಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ತದನಂತರ ಮೂರ್ನಾಡು- ನಾಪೋಕ್ಲು ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಕೈಗೆತ್ತಿಕೊಳ್ಳುವ ಭರವಸೆ ನೀಡಿದರು.

ಕೊಡಗಿನಲ್ಲಿ ಪ್ರತಿಯೊಂದು ವಿಚಾರಕ್ಕೂ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ರಸ್ತೆ ದುಸ್ಥಿತಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಒಂದು ವಾರದೊಳಗೆ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳದಿದ್ದಲ್ಲಿ ನಿಮ್ಮ ಕಚೇರಿ ಎದುರು ಪ್ರತಿಭಟನೆ ಮಾಡುವುದರ ಮೂಲಕ ಕಚೇರಿಗೆ ಕಲ್ಲು ಹೊಡೆಯುವುದಾಗಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಜೆಡಿ(ಎಸ್) ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಎಇಇಗೆ ಎಚ್ಚರಿಕೆ ನೀಡಿದರು.

ರಸ್ತೆ ದುಸ್ಥಿತಿ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಬೇರೆ ರಸ್ತೆ ಮೂಲಕ ತೆರಳುತ್ತಾರೆ. ಜಿಲ್ಲೆಯ ಬಹುತೇಕ ರಸ್ತೆಗಳು ದುಸ್ಥಿತಿಗೆ ಜನಪ್ರತಿನಿಧಿಗಳ ನಿರ್ಲಕ್ಷೃವೇ ಕಾರಣ ಎಂದು ದೂಷಿಸಿದರು. ಮೂರ್ನಾಡು- ನಾಪೋಕ್ಲು ರಸ್ತೆ ದುಸ್ಥಿತಿ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆದಿದ್ದೇವೆ. ಗುತ್ತಿಗೆದಾರ ಜನಪ್ರತಿನಿಧಿಗಳಿಗೂ ಬೆಲೆ ಕೊಡುತ್ತಿಲ್ಲ ಎಂದು ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಮೊಣ್ಣಪ್ಪ ಟೀಕಿಸಿದರು.

ರಸ್ತೆ ಸುಸ್ಥಿತಿಗೆ ತರದಿದ್ದಲ್ಲಿ ಚುನಾವಣೆ ಬಹಿಷ್ಕರಿಸಲಾಗುವುದೆಂದು ಹೊದ್ದೂರು ನಿವಾಸಿ ಚೌರೀರ ರಮೇಶ್ ಘೋಷಿಸಿದರು. ಮೂರು ವರ್ಷದಿಂದ ರಸ್ತೆ ದುಸ್ಥಿತಿಯಲ್ಲಿದ್ದು, ಆಟೋರಿಕ್ಷಾ ಕೂಡ ಬಾಡಿಗೆಗೆ ಬರುವುದಿಲ್ಲ ಎಂದು ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಂ. ಹಮೀದ್ ಹೇಳಿದರು.

ಪ್ರತಿಭಟನೆಯಲ್ಲಿ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ, ಮಡಿಕೇರಿ ನಗರಸಭೆ ಸದಸ್ಯ ಮುಸ್ತಫಾ, ಜೆಡಿಎಸ್ ಮುಖಂಡರಾದ ಮನ್ಸೂರ್ ಆಲಿ, ಎನ್.ಸಿ. ಸುನಿಲ್, ಡೆನ್ನಿ ಬರೋಸ್, ಗುಲಾಬಿ ಜನಾರ್ಧನ, ಪಿ.ಎ. ಮಂಜುನಾಥ್, ಕೊಟ್ಟಮುಡಿ ಯೂಸೂಫ್, ಬಲ್ಲಚಂಡ ಗೌತಮ್, ಜಾಸೀರ್, ಗ್ರಾಮದ ಪ್ರಮುಖರಾದ ವಾಂಚಿರ ರಾಜ, ವಾಂಚಿರ ಶುಭ, ತೆಕ್ಕಡ ಶ್ರೀನಿಕ್, ಕೋರನ ರವಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net