ಹೊದ್ದೂರು ಶ್ರೀಶಾಸ್ತ ಈಶ್ವರ, ಗಣಪತಿ ದೇವರಿಗೆ ಬೆಳ್ಳಿ, ಕಂಚಿನ ಕವಚಧಾರಣೆ

21adarshkdga1
Published on

ಮಡಿಕೇರಿ: ಹೊದ್ದೂರು ಶ್ರೀ ಶಾಸ್ತ-ಈಶ್ವರ ದೇವರಿಗೆ ಬೆಳ್ಳಿ ಹಾಗೂ ಕಂಚಿನ ಕವಚಧಾರಣೆ ಮತ್ತು ಶ್ರೀ ಮಹಾಗಣಪತಿ ದೇವರಿಗೆ ಕಂಚಿನ ಕವಚಧಾರಣೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.


ಉದ್ಯಮಿಗಳಾದ ಎ.ಆರ್.ರಾಜೇಶ್, ರಾಜೇಂದ್ರ ಹಾಗೂ ವೆಂಕಟೇಶ್ ಕುಮಾರ್ ನೀಡಿದ ಬೆಳ್ಳಿಯ ಮತ್ತು ಕಂಚಿನ ಕವಚವನ್ನು ಅಭಿಷೇಕದ ನಂತರ ದೇವರಿಗೆ ತೊಡಿಸಲಾಯಿತು. ನಂತರ ಶ್ರೀ ಬೇಟೆ ಅಯ್ಯಪ್ಪ ಹಾಗೂ ಶ್ರೀ ವಿಷ್ಣುಮೂರ್ತಿ (ಚಾಮುಂಡಿ) ದೇವರಿಗೆ ಕಲಶಾಭಿಷೇಕ ನಡೆಯಿತು.


ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಂಗಳೂರಿನ ಪುರೋಹಿತರಾದ ಜನಾರ್ಧನ ಹಾಗೂ ತಂಡದ ನೇತೃತ್ವದಲ್ಲಿ ದೇವಾಲಯದ ಅರ್ಚಕರಾದ ಹರಿಪ್ರಸಾದ್ ಮುಂದಾಳತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಿತು.


ಮೈತಾಡಿ ಮಾಧವ ತಂಡದವರ ಚಂಡೆ, ಮದ್ದಳೆಯೊಂದಿಗೆ ಪುಣ್ಯಾಹವನ, ಸ್ಥಳಶುದ್ಧಿ, ಗಣಪತಿ ಹೋಮ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ, ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯ ಭಕ್ತರು ಪೂಜಾ ಮಹೋತ್ಸವಕ್ಕೆ ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net