

ನಾಪೋಕ್ಲು:
ಒಂದು ಕಡೆ ಸದ್ದಿಲ್ಲದೆ ಹರಿಯುತ್ತಿರುವ ಕಾವೇರಿ ನದಿ…ಮತ್ತೊಂದು ಕಡೆ ಹಸಿರು ಹೊದ್ದಿರುವ ಕಾಫಿ ತೋಟಗಳು.. ಇದರ ಮಧ್ಯೆ ಇರುವ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇನ್ನು ಒಂದು ತಿಂಗಳು ಪೂರ್ತಿ ಹಾಕಿ ಕಲರವ. ಕೊಡವ ಕೌಟುಂಬಿ ಹಾಕಿ ಪಂದ್ಯಾವಳಿಯ ಸಂಪ್ರದಾಯದಂತೆ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ. ಬೋಪಣ್ಣ ಬೆಳ್ಳಿಯ ಹಾಕಿ ಸ್ಟಿಕ್‌ನಿಂದ ಬೆಳ್ಳಿಯ ಚೆಂಡನ್ನು ದೂಡುವ ಮೂಲಕ ಸಂಭ್ರಮದ ೨೪ನೇ ಕೊಡವ ಹಾಕಿ ಹಬ್ಬ ’ಕುಂಡ್ಯೋಳಂಡ ಹಾಕಿ ಕಾರ್ನಿವಲ್’ಗೆ ಶನಿವಾರ ವಿದ್ಯುಕ್ತ ಚಾಲನೆ ನೀಡಿದರು. ಈ ಬೆನ್ನಲ್ಲೇ ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ೩೬೦ ಕೊಡವ ಕುಟುಂಬಗಳಿಗೆ ಗೌರವ ಸೂಚಕವಾಗಿ ಬಣ್ಣ ಬಣ್ಣದ ೩೬೦ ಬಲೂನುಗಳನ್ನು ಆಕಾಶಕ್ಕೆ ಹಾರಿ ಬಿಡಲಾಯಿತು. ಇದರ ಜತೆಗೆ ’ಕುಂಡ್ಯೋಳಂಡ ಹಾಕಿ ಕಾರ್ನಿವಲ್’ ಲಾಂಛನ ಒಳಗೊಂಡ ಬೃಹತ್ ಗಾಳಿಪಟವನ್ನೂ ಹಾರಿಸಲಾಯಿತು. ಇದರ ಹಿಂದೆಯೇ ಬಣ್ಣ ಬಣ್ಣದ ಗಾಳಿಪಟಗಳನ್ನು ಒಂದರ ಹಿಂದೊಂದರಂತೆ ಹಾರಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಲಾಯಿತು.
ಇದಕ್ಕೂ ಮೊದಲು ನಾಪೋಕ್ಲು ರಾಮಮಂದಿರದಿಂದ ಕ್ರೀಡಾಂಗಣದ ತನಕ ವರ್ಣರಂಜಿತ ಮೆರವಣಿಗೆ ಏರ್ಪಡಿಸಲಾಗಿತ್ತು. ಕುಂಡ್ಯೊಳಂಡ ಕುಟುಂಬದ ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಎಲ್ಲಾ ಸದಸ್ಯರು ಕೊಡವ ಸಾಂಪ್ರದಾಯಿಕ ದಿರಿಸು ಧರಿಸಿ ತಳಿಯಕ್ಕಿ ಬೊಳಕ್ ಹಾಗೂ ದುಡಿ ಕೊಟ್ ಪಾಟ್‌ನೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ವಿಶೇಷ ಎಂದರೆ ಕುಂಡ್ಯೋಳಂಡ ಕುಟುಂಬದಿಂದ ಬೇರೆ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿರುವ ಹೆಣ್ಣುಮಕ್ಕಳು ಕೂಡ ಸಾಂಪ್ರದಾಯಿಕ ದಿರಿಸಿನೊಂದಿಗೆ ಪಾಲ್ಗೊಂಡು ಗಮನ ಸೆಳೆದರು. ಕ್ರೀಡಾಂಗಣಕ್ಕೆ ಮೆರವಣಿಗೆಯಲ್ಲಿ ಆಗಮಿಸಿದ ಕುಂಡ್ಯೋಳಂಡ ಕುಟುಂಬಸ್ಥರು ಮತ್ತು ಮದುವೆಯಾಗಿ ಹೋದ ಹೆಣ್ಣುಮಕ್ಕಳು ಕ್ರೀಡಾಂಗಣದಲ್ಲಿ ಶಿಸ್ತುಬದ್ಧವಾಗಿ ಪರೇಡ್ ನಡೆಸಿದರು. ಕೊಡಗಿನಲ್ಲಿ ಹಾಕಿ ಪಂದ್ಯಾವಳಿಗೆ ಕಾರಣಕರ್ತರಾದ ಪಾಂಡಂಡ ಕುಟ್ಟಪ್ಪ ಅವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು..
ಕೊಡವ ಹಾಕಿ ಅಕಾಡೆಮಿ ಮತ್ತು ಕುಂಡ್ಯೋಳಂಡ ಹಾಕಿ ಕಾರ್ನಿವಲ್ ಧ್ವಜಾರೋಹಣ ನಂತರ ಈ ತನಕ ನಡೆದಿರುವ ೨೩ ಹಾಕಿ ಹಬ್ಬ ಮತ್ತು ಈಗ ನಡೆಯುತ್ತಿರುವ ೨೪ನೇ ಕೊಡವ ಕೌಟುಂಬಿಕ ಹಾಕಿ ಹಬ್ಬದ ನೆನಪಿಗೆ ೨೪ ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಕೊಡವರ ಐನ್‌ಮನೆ ಬಿಂಬಿಸುವ ವೇದಿಕೆಯ ವಿನ್ಯಾಸ ಆಕರ್ಷಕವಾಗಿದ್ದು, ಗಮನ ಸೆಳೆಯುತ್ತಿದೆ. ಕ್ರೀಡಾಂಗಣದಲ್ಲಿ ೪೦ ಸಾವಿರ ಪ್ರೇಕ್ಷಕರು ಕುಳಿತುಕೊಳ್ಳುವ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.
ಶನಿವಾರ ಆರಂಭವಾಗಿರುವ ’ಕುಂಡ್ಯೋಳಂಡ ಹಾಕಿ ಕಾರ್ನಿವಲ್’ ಏ.೨೮ರ ತನಕ ನಡೆಯಲಿದೆ. ಇದಕ್ಕಾಗಿ ಇಲ್ಲಿ ೩ ಕ್ರೀಡಾಂಗಣಗಳ ವ್ಯವಸ್ಥೆ ಮಾಡಲಾಗಿದೆ. ೩೬೦ ಕುಟುಂಬಗಳು ಪ್ರಶಸ್ತಿಗಾಗಿ ಸೆಣೆಸಾಡಲಿವೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದಕ್ಕೊಸ್ಕರ ಉದ್ಯೋಗ ಮತ್ತಿತರ ಕಾರಣಗಳಿಂದ ಕೊಡಗಿನಿಂದ ಹೊರಗೆ ನೆಲೆಸಿರುವವರು ರಜೆ ಮಾಡಿ ಕೊಡಗಿಗೆ ಆಗಮಿಸುತ್ತಿದ್ದಾರೆ. ಇಲ್ಲಿ ಆಹಾರ, ಜ್ಯೂಸ್, ಎಳೆನೀರು ಸೇರಿದಂತೆ ವಿವಿಧ ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ಅಂಗಡಿಗಳನ್ನೂ ತೆರೆದಿದ್ದಾರೆ.
’ಕುಂಡ್ಯೋಳಂಡ ಹಾಕಿ ಕಾರ್ನಿವಲ್’ ಉದ್ಘಾಟನೆಯ ಅಂಗವಾಗಿ ಮೊದಲು ಭಾರತೀಯ ಕ್ರೀಡಾ ಪ್ರಾಧಿಕಾರದ ಬಾಲಕಿಯರು ಮತ್ತು ಕೂರ್ಗ್ ೧೧ ಬಾಲಕಿಯರ ಮಧ್ಯೆ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿತ್ತು. ಎರಡೂ ತಂಡಗಳು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದವಾದರೂ ಸಾಯಿ ಬಾಲಕಿಯರ ತಂಡದ ಪ್ರದರ್ಶನ ಒಂದು ಕೈ ಮೇಲಾದಂತೆ ಕಂಡುಬಂತು. ಕೊನೆಗೆ ಸಾಯಿ ಬಾಲಕಿಯರ ತಂಡ ೨-೦ ಗೋಲುಗಳ ಅಂತರದಿಂದ ಕೂರ್ಗ್ ೧೧ ಬಾಲಕಿಯರ ಎದುರು ಗೆಲುವು ಸಾಧಿಸಿದರು.
ಬಹುನಿರೀಕ್ಷಿತ ಮತ್ತೊಂದು ಪ್ರದರ್ಶನ ಪಂದ್ಯ ಇಂಡಿಯನ್ ನೆವಿ ಮತ್ತು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕೊಡಗಿನ ಹಾಕಿ ಆಟಗಾರರನ್ನು ಒಳಗೊಂಡಿದ್ದ ಕೂರ್ಗ್ ೧೧ ತಂಡಗಳ ಮಧ್ಯೆ ನಡೆಯಿತು. ಕೂಗ್ ೧೧ ತಂಡದಲ್ಲಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ್ ಜರ್ಸಿ ನಂ.೭ ಧರಿಸಿ ಆಡವಾಡಿ ಗಮನ ಸೆಳೆದರು. ಶಾಲಾ ದಿನಗಳಲ್ಲಿ ೧೭ ವರ್ಷದೊಳಗಿನ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ವೆಂಕಟ್ ರಾಜ್ ತಮ್ಮ ರಾಜ್ಯ ತಂಡಕ್ಕೆ ಆಡಿದ್ದನ್ನು ಈ ವೇಳೆ ನೆನಪಿಸಿಕೊಂಡರು. ಈ ತಂಡದಲ್ಲಿ ಕೊಡಗಿನ ಹೆಸರಾಂತ ಆಟಗಾರರಾದ ಎಸ್.ಕೆ ಉತ್ತಪ್ಪ, ನಿಖಿಲ್ ತಿಮ್ಮಯ್ಯ ಮತ್ತಿತರರು ಪಾಲ್ಗೊಂಡಿದ್ದರು. ಇಂಡಿಯನ್ ನೆವಿ ತಂಡದಲ್ಲಿ ಕೊಡಗಿನಿಂದ ಆತಿಥೇಯ ಕುಂಡ್ಯೋಳಂಡ ಕುಟುಂಬದ ಕೆ.ಟಿ. ಕಾರ್ಯಪ್ಪ, ಕುಪ್ಪಂಡ ಭವಿನ್ ಕುಶಾಲಪ್ಪ ಹಾಗೂ ಪಳಂಗಪ್ಪ ಐ.ಇ. ಆಟವಾಡಿದರು.
ತೀವ್ರ ಹಣಾಹಣಿಯಿಂದ ಕೂಡಿದ್ದ ಈ ಪಂದ್ಯ ಕೊನೆಯ ಹಂತದಲ್ಲಿ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಮೊದಲಾರ್ಧದಲ್ಲಿ ಕೂರ್ಗ್ ೧೧ ತಂಡ ಮೇಲುಗೈ ಸಾಧಿಸಿ ೨-೦ಗೋಲುಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿತ್ತು. ಇಂಡಿಯನ್ ನೆವಿಗೆ ೬ ಪೆನಾಲ್ಟಿ ಕಾರ್ನರ್ ಅವಕಾಶಗಳು ಸಿಕ್ಕಿದರು ದ್ವಿತಿಯಾರ್ಧದಲ್ಲಿ ೧ ಮಾತ್ರ ಗೋಲ್ ಆಗಿ ಪರಿವರ್ತಿಸುವಲ್ಲಿ ತಂಡ ಯಶಸ್ವಿಯಾಯಿತು. ಕೂರ್ಗ್ ೧೧ ಪರ ಗೋಲ್‌ಕೀಪರ್ ಮೇರಿಯಂಡ ರಾಯ್ ಅಪ್ಪಣ್ಣ ಅದ್ಭುತ ಪ್ರದರ್ಶನ ನೀಡಿ ಸಂಭಾವ್ಯ ಗೋಲುಗಳನ್ನು ತಡೆದರು. ತಂಡದ ಪರ ಚಿರನ್ ಮೇದಪ್ಪ ಎರಡೂ ಗೋಲುಗಳನ್ನು ದಾಖಲಿಸಿದರು. ದ್ವಿತೀಯಾರ್ಧದಲ್ಲಿ ಇಂಡಿಯನ್ ನೆವಿ ಪರ ಮೊದಲ ಗೋಲು ಹೊಡೆದರೆ ಮತ್ತೊಂದು ಗೋಲ್ ಪೆನಾಲ್ಟಿ ಕಾರ್ನರ್ ಸದ್ಬಳಕೆಯಿಂದ ಸಿಕ್ಕಿತು. ಹೀಗೆ ಪಂದ್ಯ ಸಮಬಲ ಸಾಧಿಸಿದ ನಂತರ ಎರಡೂ ತಂಡಗಳು ರೋಚಕ ಹೋರಾಟ ನಡೆಸಿದವಾದರೂ ಡ್ರಾದಲ್ಲಿ ಅಂತ್ಯವಾಯಿತು.
ಮಧ್ಯಾಹ್ನ ನಂತರ ಹಂಚೆಟ್ಟಿರ ಮತ್ತು ಪೆಮ್ಮುಡಿಯಂಡ ಕುಟುಂಬಗಳ ನಡುವೆ ನಡೆದ ಕೌಟುಂಬಿಕ ಪಂದ್ಯಾವಳಿಗಳ ಮೊದಲ ಲೀಗ್ ಪಂದ್ಯದಲ್ಲಿ ಹಂಚೆಟ್ಟಿರ ತಂಡ ೧-೦ ಗೋಲುಗಳ ಅಂತರಿದಂದ ಜಯ ಸಾಧಿಸಿತು.