ಕುಶಾಲನಗರ: ಕುಶಾಲನಗರ ಟೈಕೂನ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಹಾಕಿ ಉಚಿತ ತರಬೇತಿ ಶಿಬಿರ ಏ.7 ರಿಂದ ಆರಂಭಗೊಳ್ಳಲಿದೆ ಎಂದು ಕ್ಲಬ್ ಕಾರ್ಯದರ್ಶಿ ಬಿ.ಟಿ.ಪೂರ್ಣೇಶ್ ತಿಳಿಸಿದರು.
ಕಳೆದ ಹತ್ತು ವರ್ಷಗಳಿಂದ ಶಿಬಿರ ನಡೆಯುತ್ತಿದ್ದು, ಈ ಮೂಲಕ ತರಬೇತಿ ಪಡೆದ ವಿದ್ಯಾರ್ಥಿಗಳು ಕ್ರೀಡಾ ಶಾಲೆಗಳಿಗೆ ನೇಮಕಗೊಳ್ಳುತ್ತಿದ್ದಾರೆ. ಶಿಬಿರದಲ್ಲಿ ಹಾಕಿ, ಅಥ್ಲೆಟಿಕ್ಸ್ ಮತ್ತು ಈಜು ಬಗ್ಗೆ ತರಬೇತಿ ನೀಡಲಾಗುತ್ತದೆ. ನುರಿತ ತರಬೇತುದಾರರ ಮೂಲಕ ಹದಿನೈದು ದಿನಗಳವರೆಗೆ ಶಿಬಿರ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಂಟು ವರ್ಷ ಮೇಲ್ಪಟ್ಟವರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಕುಶಾಲನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶಿಬಿರ ನಡೆಯಲಿದೆ. ಬೆಳಗ್ಗೆ 6.30 ರಿಂದ 8 ಗಂಟೆ ತನಕ ಹಾಕಿ ನಂತರ ಅಥ್ಲೆಟಿಕ್ಸ್ ತರಬೇತಿ ನೀಡಲಾಗುವುದು. ಈಜು ತರಬೇತಿಗೆ ಮಾತ್ರ ಖಾಸಗಿ ಈಜುಕೊಳ ಸೌಲಭ್ಯ ಹೊಂದಬೇಕಾದ ಕಾರಣ ಶಿಬಿರಾರ್ಥಿಗಳಿಗೆ ಕನಿಷ್ಠ ಶುಲ್ಕ ವಿಧಿಸಲಾಗುತ್ತದೆ ಎಂದರು.
ಕ್ರೀಡೆ ಮೂಲಕ ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆ ವೃದ್ಧಿಪಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಿ.ಟಿ.ಪೂರ್ಣೇಶ್, ಚಂದ್ರಶೇಖರ ರೆಡ್ಡಿ, ತಾತ್ವಿಕ್ ಶೆಟ್ಟಿ, ಶ್ರೇಯಸ್ ಶೆಟ್ಟಿ, ಅರುಣ್ ಮಹೇಶ್, ನಂದ, ದಿನೇಶ್, ಸೌಮ್ಯ, ಚಂದ್ರಶೇಖರ್, ಕಿಶನ್ ಗೌಡ ಮತ್ತಿತರರು ತರಬೇತಿ ನೀಡಲಿದ್ದಾರೆ ಎಂದರು.
ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಬಗ್ಗೆ ನಮ್ಮ ಸಂಸ್ಥೆ ಹೆಚ್ಚಿನ ಗಮನ ಹರಿಸಲಿದ್ದು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಪೂರ್ಣೇಶ್ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್: 9449831426/ 9448647608 ಸಂಪರ್ಕಿಸುವಂತೆ ಕೋರಿದರು. ಖಜಾಂಚಿ ಪ್ರಕಾಶ್ ಪಳಂಗಪ್ಪ, ಸಹ ಕಾರ್ಯದರ್ಶಿ ಚಂದ್ರಶೇಖರ್, ಸಂಸ್ಥೆಯ ನಿರ್ದೇಶಕರಾದ ಅರುಣ್, ಮಹೇಶ್ ಇದ್ದರು.