ಹಾಕಿ ಉತ್ಸವ: ಫೈನಲ್ಸ್‌ಗೆ ಶ್ರೇಷ್ಠ ಆಟಗಾರರ ಆಗಮನ

muddanada logo
Published on

ಮಡಿಕೇರಿ: ಮುದ್ದಂಡ ಕಪ್ ಹಾಕಿ ಉತ್ಸವದ ಫೈನಲ್ ಪಂದ್ಯಾವಳಿ ಮತ್ತು ಸಮಾರೋಪ ಸಮಾರಂಭ ನಡೆಯುವ ಏ.೨೭ ರಂದು ಪ್ರತಿಷ್ಠಿತ ಪ್ರಶಸ್ತಿ ವಿಜೇತ, ಶ್ರೇಷ್ಠ ಆಟಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುದ್ದಂಡ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ.

೧೯೭೫ರ ವಿಶ್ವಕಪ್ ಹಾಕಿ ವಿಜೇತ, ವಿಶ್ವದಲ್ಲೇ ಅತಿ ಹೆಚ್ಚು ಪದಕ ಗಳಿಸಿರುವ ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಕೊಡಗಿನ ಸಿಡಿಲಮರಿ ಖ್ಯಾತಿಯ ಬಿ.ಪಿ.ಗೋವಿಂದ ಅವರು ಮುದ್ದಂಡ ಹಾಕಿ ಹಬ್ಬಕ್ಕೆ ಆಗಮಿಸಲಿದ್ದಾರೆ. ವಿಶ್ವಕಪ್ ಹಾಕಿ ಭೂಪಟದಲ್ಲಿ ಭಾರತ ಹಾಕಿ ತಂಡದ ಹೆಸರನ್ನು ಅಜರಾಮರಗೊಳಿಸಿದ ಕೊಡಗಿನ ವೀರ, ೧೯೭೫ ವಿಶ್ವಕಪ್ ಹಾಕಿ ವಿಜೇತ ತಂಡದ ಆಟಗಾರ ಪೈಕೇರ ಕಾಳಯ್ಯ, ೧೯೮೦ ಮಾಸ್ಕೋ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನಾಯಕ ಪದ್ಮಶ್ರೀ ಪುರಸ್ಕೃತ ವಾಸುದೇವ ಭಾಸ್ಕರ್, ೧೯೮೦ ಮಾಸ್ಕೋ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಎಂ.ಎಂ.ಸೋಮಯ್ಯ ಆಗಮಿಸಲಿದ್ದಾರೆ. ೧೯೬೮ ಒಲಂಪಿಕ್ಸ್‌ನ ಗೋಲ್ ಕೀಪರ್ ಆಗಿ ಪ್ರತಿನಿಧಿಸಿದ ಆಟಗಾರ ಮುನೀರ್ ಸೇಟ್, ಅರ್ಜುನ ಪ್ರಶಸ್ತಿ ವಿಜೇತ ಮಹಮ್ಮದ್ ರಿಯಾಜ್ ಅವರು ಆಗಮಿಸಲಿದ್ದಾರೆ.

ಹಾಕಿ ದಿಗ್ಗಜರನ್ನು ಅರ್ಥಪೂರ್ಣವಾಗಿ ಬರಮಾಡಿಕೊಂಡು ತೆರೆದ ಜೀಪಿನಲ್ಲಿ ಕೊಡಗಿನ ಸಾಂಪ್ರದಾಯಿಕ ದುಡಿಕೊಟ್ ಪಾಟ್ ನೊಂದಿಗೆ ಮೈದಾನದ ಸುತ್ತ ಮೆರವಣಿಗೆ ಮಾಡಲಾಗುವುದು ಎಂದು ರಶಿನ್ ಸುಬ್ಬಯ್ಯ ಮಾಹಿತಿ ನೀಡಿದ್ದಾರೆ.

ಕೊಡವ ಕೌಟುಂಬಿಕ ಹಾಕಿ ಮೂರು ಬಾರಿ ಲಿಮ್ಕಾ ದಾಖಲೆ, ಒಂದು ಬಾರಿ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಇಂದು ಕೊಡವ ಹಾಕಿ ವಿಶ್ವ ವಿಖ್ಯಾತ ಪಡೆದಿದೆ. ಎಲ್ಲಾ ಕ್ರೀಡಾ ಪ್ರೇಮಿಗಳು ಮುದ್ದಂಡ ಹಾಕಿ ಹಬ್ಬದ ಕೊನೆಯ ದಿನದ ಅದ್ಭುತ ಕ್ಷಣವನ್ನು ವೀಕ್ಷಿಸಬೇಕು ಎಂಬುವುದು ಮುದ್ದಂಡ ಕುಟುಂಬಸ್ಥರು ಹಾಗೂ ಕೊಡವ ಹಾಕಿ ಅಕಾಡೆಮಿಯ ಬಯಕೆ ಎಂದು ಹೇಳಿದ್ದಾರೆ.

ಹಾಕಿ ಜನಕನ ಕನಸು ನನಸು: ಕೌಟುಂಬಿಕ ಹಾಕಿಯ ಜನಕ ಪಾಂಡಂಡ ಕುಟ್ಟಪ್ಪ ಅವರು ವಿಶ್ವಕಪ್ ವಿಜೇತರು ಹಾಗೂ ಒಲಂಪಿಕ್‌ನಲ್ಲಿ ಚಿನ್ನ ಗೆದ್ದ ಕೊಡಗಿನ ಆಟಗಾರರನ್ನು ಒಂದೇ ವೇದಿಕೆಗೆ ಕರೆತರಬೇಕೆಂಬ ಕನಸು ಕಂಡಿದ್ದರು, ಅದು ಇಂದು ನನಸಾಗುತ್ತಿದೆ. ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ವಿಶ್ವಕಪ್ ವಿಜೇತರಾದ ಕಾಳಯ್ಯ ಹಾಗೂ ಗೋವಿಂದ ಅವರು ವಿಶ್ವಕಪ್ ಗೆದ್ದು ೫೦ ವರ್ಷ ತುಂಬಿದ ಸಡಗರದಲ್ಲಿದ್ದಾರೆ. ಇದೇ ಪ್ರಥಮ ಬಾರಿಗೆ ಹಾಕಿ ಪ್ರೇಮಿಗಳ ಸಮ್ಮುಖದಲ್ಲಿ ಇವರನ್ನು ಗೌರವಿಸಬೇಕು ಎಂಬ ತೀರ್ಮಾನವನ್ನು ಕೊಡವ ಹಾಕಿ ಅಕಾಡೆಮಿ ಹಾಗೂ ಮುದ್ದಂಡ ಕುಟುಂಬದವರು ತೆಗೆದುಕೊಂಡಿದ್ದಾರೆ ಎಂದು ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ.

೧೯೮೦ರ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ೪೫ ವರ್ಷಗಳು ತುಂಬಿದ ಸಂಭ್ರಮದಲ್ಲಿರುವ ಪದ್ಮಶ್ರೀ ಪುರಸ್ಕೃತ ವಾಸುದೇವ ಭಾಸ್ಕರನ್ ಹಾಗೂ ಕೊಡಗಿನವರಾದ ಮನೆಯಪಂಡ ಸೋಮಯ್ಯ ಅವರನ್ನು ಕೂಡ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net