

ಮಡಿಕೇರಿ:
25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ 'ಮುದ್ದಂಡ ಹಾಕಿ ಹಬ್ಬ-2025' ಕ್ಕೆ ಮಡಿಕೇರಿಯಲ್ಲಿ ಶುಕ್ರವಾರ ಅದ್ಧೂರಿ ಚಾಲನೆ ಸಿಕ್ಕಿದೆ.
ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ. ಬೋಪಣ್ಣ ಬೆಳ್ಳಿಯ ಹಾಕಿ ಸ್ಟಿಕ್‌ನಿಂದ ಬೆಳ್ಳಿ ಚೆಂಡು ತಳ್ಳುವ ಮೂಲಕ 2025ರ ಕೊಡವ ಹಾಕಿ ಹಬ್ಬ ಉದ್ಘಾಟಿಸಿದರು. ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟಿಸಿದರು.
ನಂತರ ಮಾತನಾಡಿ, ಕೊಡವ ಹಾಕಿ ನಮ್ಮೆ ಎನ್ನುವುದು ಕ್ರೀಡೆಗೆ ಸೀಮಿತ ಹಬ್ಬ ಅಲ್ಲ. ಇದು ಕೊಡವ ಸಂಸ್ಕೃತಿ, ಆಚಾರ, ವಿಚಾರ ಉಳಿಸಲು ಇಡಲಾಗುತ್ತಿರುವ ಪುಟ್ಟ ಪುಟ್ಟ ಹೆಜ್ಜೆಗಳು. ಈ ಕ್ರೀಡಾಕೂಟಕ್ಕೆ ಸರ್ಕಾರ ಕಳೆದ 2 ವರ್ಷದಿಂದ ತಲಾ 1 ಕೋಟಿ ರೂ. ಅನುದಾನ ಕೊಡುತ್ತಾ ಬಂದಿದೆ. ಈ ಬಾರಿಯೂ ಸಿಎಂ ಬಳಿಗೆ ತೆರಳಿ ಮನವಿ ಸಲ್ಲಿಸಲಾಗಿದೆ. ಈ ಕ್ರೀಡಾಕೂಟಕ್ಕೂ ಅನುದಾನ ಸಿಗುವ ವಿಶ್ವಾಸ ಇದೆ ಎಂದರು.
'ಮುದ್ದಂಡ ಹಾಕಿ ನಮ್ಮೆ' ಪುಸ್ತಕ ಬಿಡುಗಡೆ ಮಾಡಿದ ಕೊಡಗು-ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ಕುಟುಂಬಗಳ ಮಧ್ಯೆ ನಡೆಯುವ ಕ್ರೀಡಾಕೂಟವೊಂದನ್ನು ಸಂಘಟಿಸಿ 25 ವರ್ಷ ಕಾಲ ನಡೆಸುವುದು ಚಿಕ್ಕ ವಿಷಯ ಅಲ್ಲ. ಇಡೀ ವಿಶ್ವವೇ ಗುರುತಿಸುವಂತೆ ವರ್ಷದಿಂದ ವರ್ಷಕ್ಕೆ ಈ ಕ್ರೀಡಾಕೂಟದ ಜನಪ್ರಿಯತೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮತ್ತಿತರರು ಪಾಲ್ಗೊಂಡಿದ್ದರು. ಒಂದು ತಿಂಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟದಲ್ಲಿ 396 ಕೊಡವ ಕುಟುಂಬಗಳು ಪ್ರಶಸ್ತಿಗಾಗಿ ಸೆಣೆಸಲಿವೆ.