

ಬೆಳಗಾವಿ: ಹಾಕಿಯನ್ನು ರಾಷ್ಟ್ರೀಯ ಕ್ರೀಡೆ ಎಂದು ಈವರೆಗೂ ಘೋಷಿಸಿಲ್ಲವೆಂದು ಕೇಂದ್ರ ಕ್ರೀಡಾ ಸಚಿವಾಲಯವೇ ಮಾಹಿತಿ ಹಕ್ಕು ಅಡಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಸ್ಪಷ್ಟನೆ ನೀಡಿದೆ. ಈಗ ಹಾಕಿ ಇಂಡಿಯಾ ಶತಮಾನೋತ್ಸವದ ಸಂದರ್ಭದಲ್ಲಾದರೂ ರಾಷ್ಟ್ರೀಯ ಕ್ರೀಡೆಯನ್ನಾಗಿ ಘೋಷಿಸಬೇಕೆಂಬ ಬೇಡಿಕೆ ಮುನ್ನಲೆಗೆ ತರಬೇಕಿದೆ ಎಂದು ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಹೇಳಿದರು.
ಹಾಕಿ ಇಂಡಿಯಾ ಶತಮಾನೋತ್ಸವದ ಪ್ರಯುಕ್ತ ನಗರದ ಲೇಲೆ ಮೈದಾನದಲ್ಲಿ ಏರ್ಪಡಿಸಿದ್ದ ಪಂದ್ಯಾವಳಿಗಳ ವಿಜೇತ ತಂಡಗಳಿಗೆ ಶುಕ್ರವಾರ ಟ್ರೋಫಿ ವಿತರಿಸಿ ಮಾತನಾಡಿದ ಅವರು, ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧಿಜಿ ಅಧ್ಯಕ್ಷತೆಯಲ್ಲಿ ಎಐಸಿಸಿ ಅಧಿವೇಶನ ಜರುಗಿದ್ದ ಸ್ಥಳದಲ್ಲಿ ಇವತ್ತು ಹಾಕಿ ಶತಮಾನೋತ್ಸವ ಆಚರಿಸಲಾಗುತ್ತಿದ್ದು, ಈ ಆಟವನ್ನು ರಾಷ್ಟ್ರೀಯ ಕ್ರೀಡೆಯನ್ನಾಗಿ ಅಧಿಕೃತವಾಗಿ ಘೋಷಿಸುವಂತೆ ಇಲ್ಲಿಂದಲೇ ಕೂಗು ಆರಂಭಿಸೋಣ ಎಂದರು.
ಶತಮಾನೋತ್ಸವ ಪ್ರಯುಕ್ತ ಜರುಗಿದ ಎರಡು ದಿನಗಳ ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ಗೋಗಟೆ ಕಾಲೇಜ್ ವಿಜಯ, ಆರ್‌ಪಿಡಿ ಕಾಲೇಜು ರನ್ನರ್ ಅಪ್, ಬಾಲಕಿಯರಲ್ಲಿ ಆರ್‌ಪಿಡಿ ವಿಜೇತ ಮತ್ತು ಜಿಎಸ್‌ಎಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು.
ಐಆರ್‌ಎಸ್ ಅಧಿಕಾರಿ ಸಾಗರ ದೇಶಪಾಂಡೆ, ಹಿರಿಯ ಸಾಮಾಜಿಕ ಕಾರ್ಯಕರ್ತೆ ಶೈಲಜಾ ಭಿಂಗೆ, ಹಾಕಿ ಬೆಳಗಾವಿ ಅಧ್ಯಕ್ಷ ಗೂಳಪ್ಪ ಹೊಸಮನಿ, ಪ್ರಕಾಶ ಕಾಲಕುಂದ್ರೀಕರ, ಮಲ್ಲೇಶ ಚೌಗಲೆ, ನವೀನಾ ಶೆಟ್ಟಿಗಾರ, ವಿಕಾಸ ಕಲಘಟಗಿ, ಪೂಜಾ ಜಾಧವ, ಸುಧಾಕರ ಚಳ್ಕೆ, ಮುಕುಂದ್ ಪುರೋಹಿತ, ದತ್ತಾತ್ರೇಯ ಜಾಧವ, ಉತ್ತಮ ಶಿಂಧೆ, ಮನೋಹರ ಪಾಟೀಲ, ನಾಮದೇವ ಸಾವಂತ ಇತರರಿದ್ದರು.