ಹಾಕಿ: ೧೩ ತಂಡಗಳು ಮುಂದಿನ ಸುತ್ತಿಗೆ

kodava hocky
Published on

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿಯ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದಲ್ಲಿ ಶನಿವಾರ ೧೩ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.

ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನ ೧ರಲ್ಲಿ ಕೊಂಗೇಟಿರ ಮತ್ತು ಚೇಂದಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೫-೩ ಗೋಲುಗಳ ಅಂತರದಲ್ಲಿ ಕೊಂಗೇಟಿರ ಗೆಲುವು ಸಾಧಿಸಿತು. ಚೆಪ್ಪುಡಿರ ಮತ್ತು ಕರ್ತಮಾಡ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಚೆಪ್ಪುಡಿರ ತಂಡ ಗೆಲುವು ಸಾಧಿಸಿತು. ಚೆಪ್ಪುಡಿರ ಪರ ವಚನ್ ೨, ಚೇತನ್ ಚಿಣ್ಣಪ್ಪ ಹಾಗೂ ಸೋಮಣ್ಣ ತಲಾ ೧ ಗೋಲು ದಾಖಲಿಸಿದರು.

ಮಾದಂಡ ಮತ್ತು ಮೇಚಿಯಂಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಮೇಚಿಯಂಡ ತಂಡ ಜಯ ಸಾಧಿಸಿತು. ಮೇಚಿಯಂಡ ಪರ ವಿನಿತ್ ನಾಣಯ್ಯ ಹಾಗೂ ಸುನೀಲ್ ನಾಣಯ್ಯ ಗೋಲು ದಾಖಲಿಸಿದರು. ಮಾದಂಡ ಪರ ಸೈನಾ ಪೊನ್ನಪ್ಪ ೧ ಗೋಲು ಬಾರಿಸಿದರು. ಬೊಳ್ಳಂಡ ಮತ್ತು ಬೊಟ್ಟೋಳಂಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಬೊಟ್ಟೋಳಂಡ ಜಯ ಸಾಧಿಸಿತು. ಬೊಟ್ಟೋಳಂಡ ಪರ ಸೂರಜ್ ಅಯ್ಯಪ್ಪ ಹಾಗೂ ಮುತ್ತಣ್ಣ ತಲಾ ೧ ಗೋಲು ದಾಖಲಿಸಿದರು. ಬೊಳ್ಳಂಡ ಪರ ರತುಲ್ ತಿಮ್ಮಯ್ಯ ೧ ಗೋಲು ಬಾರಿಸಿದರು.

ಐಚೆಟ್ಟೀರ ಮತ್ತು ನಾಳಿಯಂಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ನಾಳಿಯಂಡ ತಂಡ ಗೆಲುವು ಸಾಧಿಸಿತು. ನಾಳಿಯಂಡ ಪರ ಕವನ್ ಹಾಗೂ ಕಾಳಪ್ಪ ತಲಾ ೧ ಗೋಲು ದಾಖಲಿಸಿದರು. ನೆಲ್ಲಮಕ್ಕಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ ೪-೧ ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ತಂಡ ಜಯ ಸಾಧಿಸಿತು. ನೆಲ್ಲಮಕ್ಕಡ ಪರ ಪ್ರತಿಕ್ ಪೂವಣ್ಣ ೨ ಹಾಗೂ ವೃಕ್ಷಿತ್ ಸೋಮಯ್ಯ ೧ ಗೋಲು ದಾಖಲಿಸಿದರು. ನಾಪಂಡ ಪರ ಪ್ರವೀಣ ೧ ಗೋಲು ದಾಖಲಿಸಿದರು. ಕೋಳೇರ ಮತ್ತು ಚೆಕ್ಕೇರ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಕೋಳೇರ ತಂಡ ಗೆಲುವು ಸಾಧಿಸಿತು. ಕೋಳೇರ ಪರ ಕೌಶಿಕ್ ಕಾರ್ಯಪ್ಪ, ವಿನಯ್ ನಾಣಯ್ಯ ಹಾಗೂ ಮಿಲನ್ ಮಾಚಯ್ಯ ತಲಾ ೧ ಗೋಲು ದಾಖಲಿಸಿದರು.

ಮೈದಾನ ೨ರಲ್ಲಿ ಪರದಂಡ ಮತ್ತು ಐನಂಡ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ಪರದಂಡ ತಂಡ ಜಯ ಸಾಧಿಸಿತು. ಪರದಂಡ ಪರ ಪ್ರಜ್ವಲ್ ಪೂವಣ್ಣ ಹ್ಯಾಟ್ರಿಕ್ ಗೋಲು ದಾಖಲಿಸಿದರು. ಬಯವಂಡ ಮತ್ತು ಕರವಂಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಕರವಂಡ ತಂಡ ಗೆಲುವು ದಾಖಲಿಸಿದರು. ಕರವಂಡ ಪರ ಕಿಶನ್ ಸೋಮಯ್ಯ ಹಾಗೂ ದಕ್ಷನ್ ದೇವಯ್ಯ ತಲಾ ೧ ಗೋಲು ದಾಖಲಿಸಿದರು. ಬಯವಂಡ ಪರ ಜನಕ ೧ ಗೋಲು ಬಾರಿಸಿದರು. ಕಳ್ಳಿಚಂಡ ಮತ್ತು ಕಂಬೀರಂಡ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ ೧ ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೫-೩ ಗೋಲುಗಳ ಅಂತರದಲ್ಲಿ ಕಂಬೀರಂಡ ಜಯ ಸಾಧಿಸಿತು. ಕಂಬೀರಂಡ ಪರ ಬೋಪಣ್ಣ ಹಾಗೂ ಕಳ್ಳಿಚಂಡ ಪರ ಗೌತಮ್ ತಲಾ ೧ ಗೋಲು ದಾಖಲಿಸಿದರು.

ಕೋನೇರಿರ ಮತ್ತು ಇಟ್ಟೀರ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಇಟ್ಟೀರ ಗೆಲುವು ದಾಖಲಿಸಿತು. ಇಟ್ಟೀರ ಪರ ಶಾಮ್ ಸೋಮಣ್ಣ ೧ ಗೋಲು ದಾಖಲಿಸಿದರು. ಕಾಂಡಂಡ ಮತ್ತು ಕುಲ್ಲೇಟಿರ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೪-೩ ಗೋಲುಗಳ ಅಂತರದಲ್ಲಿ ಕಾಂಡಂಡ ಗೆಲುವು ದಾಖಲಿಸಿತು. ಕುಲ್ಲೇಟಿರ ಶುಭಂ ಚಿಟ್ಟಿಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕುಪ್ಪಂಡ (ಕೈಕೇರಿ) ಮತ್ತು ಮತ್ರಂಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಜಯ ಸಾಧಿಸಿತು. ಕುಪ್ಪಂಡ ಪರ ಸೋಮಯ್ಯ ೧ ಗೋಲು ದಾಖಲಿಸಿದರು. ಮತ್ರಂಡ ವಿಶಾಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net