

ನಾಪೋಕ್ಲು: ಸುವರ್ಣ ಕರ್ನಾಟಕ-50ರ ಸಂಭ್ರಮ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಮಡಿಕೇರಿ ತಾಲೂಕು ಘಟಕ ವತಿಯಿಂದ ಭಾಗಮಂಡಲ ಹೋಬಳಿಯ ಭಾಗಮಂಡಲ ಅಯ್ಯಂಗೇರಿ ಮತ್ತು ಕುಂದಚೇರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಚೆಟ್ಟಿಮಾನಿಯಲ್ಲಿ ಹೋಬಳಿ ಮಟ್ಟದ ಗ್ರಾಮ ಸಿರಿ ಕಾರ್ಯಕ್ರಮ ಆಯೋಜಿಸುವ ಕುರಿತು ಗುರುವಾರ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು.
ಚೆಟ್ಟಿಮಾನಿಯ ಶಾದಿ ಮಹಲ್ನಲ್ಲಿ ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೊಡನೋಳನ ವಿ.ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್, ಗ್ರಾಮ ಸಿರಿ ಕಾರ್ಯಕ್ರಮವನ್ನು ಚೆಟ್ಟಿಮಾನಿಯಲ್ಲಿ ನಡೆಸುವ ಬಗ್ಗೆ ಗ್ರಾಮಸ್ಥರಿಂದ ಒಪ್ಪಿಗೆ ಪಡೆದರಲ್ಲದೆ, ಕಾರ್ಯಕ್ರಮದ ಉದ್ದೇಶ ಹಾಗೂ ರೂಪುರೇಷೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಕಾರ್ಯಕ್ರಮ ಆಯೋಜನೆ ದಿನಾಂಕ ಹಾಗೂ ಉಪಸಮಿತಿಗಳ ರಚನೆ ಮಾಡುವ ಕುರಿತು ಡಿ.5 ರಂದು ಭಾಗಮಂಡಲ ಅಯ್ಯಂಗೇರಿ ಹಾಗೂ ಕುಂದಚೇರಿ ಗ್ರಾಮಸ್ಥರ ಸಭೆಯನ್ನು ಕರೆಯಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಚೆಟ್ಟಿಮಾನಿ ಪಂಚಾಯಿತಿ ಪಿಡಿಒ ಯಾದವ್, ಕಸಾಪ ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ, ಜಿಲ್ಲಾ ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್, ರೇವತಿ ರಮೇಶ್, ಕೋಶಾಧಿಕಾರಿ ಸಂಪತ್‌ಕುಮಾರ್, ಭಾಗಮಂಡಲ ಹೋಬಳಿ ಘಟಕದ ಅಧ್ಯಕ್ಷ ಸುನಿಲ್ ಪತ್ರವೋ, ಸಂಘಟನಾ ಕಾರ್ಯದರ್ಶಿಗಳಾದ ತಳೂರು ದಿನೇಶ್ ಕರುಂಬಯ್ಯ, ಚೊಕ್ಕಾಡಿ ಪ್ರೇಮ ರಾಘವಯ್ಯ, ಪಂಚಾಯಿತಿ ಸದಸ್ಯರಾದ ಹಾರಿಸ್, ಬೊಮ್ಮಿಯನ ಬಸಪ್ಪ ಇತರರಿದ್ದರು.