

ಯಲಬುರ್ಗಾ: ಬೇವೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಇದನ್ನೂ ಓದಿ:http://ಹೋಬಳಿ ಕೇಂದ್ರ ನಿರ್ಮಾಣಕ್ಕೆ ಸಿದ್ಧತೆ
ತಾಲೂಕಿನ ಬೇವೂರು ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ಹಾಗೂ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಆದೇಶ ಪ್ರತಿ ವಿತರಿಸಿ ಮಾತನಾಡಿದರು.
ಹೋಬಳಿ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಂದಾಯ ಸಚಿವರಿಗೆ ಪತ್ರ ಬರೆದು ಹೋಬಳಿ ರಚನೆ ಕುರಿತು ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಹೋಬಳಿ ಕೇಂದ್ರ ನಿರ್ಮಾಣ ಮಾಡುವ ಕಾರ್ಯ ಸರ್ಕಾರದಿಂದ ಆರಂಭವಾಗಲಿದೆ ಎಂದರು.
ನೂತನ ಬಸ್ ನಿಲ್ದಾಣ: ಜನಸಂಖ್ಯೆ ಅನುಗುಣವಾಗಿ ಗ್ರಾಮದಲ್ಲಿ 4 ಕೋಟಿ ರೂ. ವೆಚ್ಚದ ನೂತನ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಬದ್ಧವಾಗಿದೆ. ಬಡವರು, ಮಹಿಳೆಯರಿಗಾಗಿ ಉಚಿತ ಗ್ಯಾರಂಟಿ ಕಾರ್ಯಕ್ರಮ ಜಾರಿಗೆ ತಂದಿದ್ದು ಅರ್ಹರಿಗೆ ಲಾಭವಾಗಿದೆ.
ಕರ್ನಾಟಕದಲ್ಲಿ ಇಂಥ ಜನಪರ ಕಾರ್ಯಕ್ರಮ ಜಾರಿಗೊಳಿಸಿರುವುದು ವಿಶೇಷ ಎಂದರು.
ಗ್ರಾಪಂ ಅಧ್ಯಕ್ಷೆ ಅಂದಮ್ಮ ಬಳಿಗಾರ್, ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್, ತಾಪಂ ಇಒ ಸಂತೋಷ ಪಾಟೀಲ್, ಅಧಿಕಾರಗಳಾದ ಪ್ರಾಣೇಶ ಹಾದಿಮನಿ, ಮಲ್ಲಯ್ಯ ಕುಡಗುಂಟಿ, ಸಿಡಿಪಿಒ ಸಿಂಧು ಎಲಿಗಾರ, ಚಿದಂಬರ, ಪಿಡಿಒ ಅಬ್ದುಲ್ ಗಫರ್ ಇದ್ದರು.