

ಉಡುಪಿ: ಜಿಲ್ಲೆಯಲ್ಲಿ ಯಾವುದೇ ರೀತಿಯ ಸಭೆ ಸಮಾರಂಭ, ಕಾರ್ಯಕ್ರಮಗಳಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸುವ ಮುನ್ನ ಸ್ಥಳೀಯ ಸಂಸ್ಥೆಗಳು ಅಥವಾ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ತಪ್ಪಿದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದರು.
ಶುಕ್ರವಾರ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಾವುದೇ ಪ್ರಚಾರ ಫಲಕಗಳು ಭಿತ್ತಿಪತ್ರಗಳು ಕರಪತ್ರಗಳು ಧ್ವನಿವರ್ಧಕಗಳ ಬಳಕೆ ಸೇರಿದಂತೆ ಮತ್ತಿತರ ಪ್ರಚಾರ ಕೈಗೊಳ್ಳುವ ಮುನ್ನ ನಿಗಧಿತ ಪ್ರಾಧಿಕಾರದಿಂದ ಕಾನೂನುನಡಿಯಲ್ಲಿ ಅವಶ್ಯವಿರುವ ಅನುಮತಿ ಪತ್ರವನ್ನು ಪಡೆದು ಕಾರ್ಯಗತಗೊಳಿಸಬೇಕು. ಅನುಮತಿಯ ಕಾಲಾವಧಿ ಮುಗಿದ ಕೂಡಲೇ ಅವುಗಳನ್ನು ತೆರವುಗೊಳಿಸಬೇಕು. ಯಾವುದೇ ಸಭೆ, ಸಮಾರಂಭ, ಮೆರವಣಿಗೆ ನಡೆಸಲು ಅನುಮತಿ ತೆಗೆದುಕೊಳ್ಳುವುದು ಕಡ್ಡಾಯ ಎಂದರು.
ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಹೆಸರು ನೊಂದಾವಣಿ ಆಗಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕು , ಹೆಸರು ಬಿಟ್ಟು ಹೋದಲ್ಲಿ ಕೂಡಲೇ ಹೆಸರು ನೊಂದಾಯಿಸಿಕೊಳ್ಳಬೇಕು ಮುಂದಿನ ವಾರದಲ್ಲಿ ಬಿ.ಎಲ್.ಓ ಗಳು ಹಾಗೂ ಚುನಾವಣಾ ಏಜೆಂಟರು ಮತಗಟ್ಟೆ ಕೇಂದ್ರಗಳಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಯಾವುದೇ ರೀತಿ ಗೊಂದಲಗಳಿದ್ದಲ್ಲಿ ಚುನಾವಣಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ , ಅಪರ ಜಿಲ್ಲಾಧಿಕಾರಿ ವೀಣಾ, ತಾಲೂಕು ಚುನಾವಣಾ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.