

ಹನೂರು : ರಸ್ತೆ ಬದಿಯಲ್ಲಿ ಅಂಗಡಿಯನ್ನು ತೆರೆದು ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿ ಬುಧವಾರ ತಾಲೂಕಿನ ನಾಲ್‌ರೋಡ್‌ನಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನಾಲ್‌ರೋಡ್‌ನ ವೃತ್ತದಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ಅಧಿಕಾರಿಗಳ ಕಾರ್ಯ ವೈಖರಿಯ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ನಾಲ್‌ರೋಡ್‌ನ ವೃತ್ತದ ಬಳಿ ಕೆಲವರು ಹಲವು ವರ್ಷಗಳಿಂದ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಆದರೆ ಇತ್ತೀಚಿಗೆ ಕೆಲವರು ಅಕ್ರಮವಾಗಿ ಅಂಗಡಿ ತೆರೆದಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ.ಬಿಗಿ ಕ್ರಮಕೈಗೊಳ್ಳಬೇಕು. ಇಲ್ಲವೇ ನಮಗೂ ಕೂಡ ಅಂಗಡಿ ತೆರೆಯಲು ಅವಕಾಶ ನೀಡಬೇಕು. ಹಾಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸ್ಥಳಕ್ಕೆ ಸಂಬಂಧಪಟ್ಟವರು ಆಗಮಿಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಶಾಸಕರಿಂದ ಭರವಸೆ: ಸುದ್ದಿ ತಿಳಿದು ಶಾಸಕ ಎಂ.ಆರ್ ಮಂಜುನಾಥ್ ಸ್ಥಳಕ್ಕಾಗಮಿಸಿ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದರು. ನಂತರ ಮಾತನಾಡಿ, ಈ ಸಂಬಂಧ ಹಿರಿಯ ಅಧಿಕಾರಿಗಳ ಸಭೆ ಕರೆದು ಇರುವ ಸ್ಥಳವು ಕಂದಾಯ ಇಲ್ಲವೇ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಹಾಗಾಗಿ 10 ದಿನ ಕಾಲಾವಕಾಶ ನೀಡುವಂತೆ ತಿಳಿಸಿದರು. ಮನೆ ಇಲ್ಲದವರಿಗೆ ಸರ್ಕಾರಿ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡಲು ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.