ಕಲಾವಿದರನ್ನು ಗುರುತಿಸುವ ಕಾರ್ಯ ಹೆಚ್ಚಾಗಬೇಕು

01 HANUR 6
Published on

ಹನೂರು : ಜಿಲ್ಲೆಯಲ್ಲಿ ಜನಪದ ಕಲೆಗಳು ಶ್ರೀಮಂತವಾಗಿದ್ದು, ಕಲಾವಿದರನ್ನು ಗುರುತಿಸಿ ಪ್ರ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ದೇಗುಲದ ರಂಗಮಂದಿರಲ್ಲಿ ಶುಕ್ರವಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ, ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹನೂರು ತಾಲೂಕು ಆಡಳಿತ ಸಹಯೋಗದಲ್ಲಿ ಆಯೋಜಿಸಿದ್ದ ಗಡಿನಾಡ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರವು ಹಿಂದಿನಿಂದಲೂ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಮುಖ್ಯಮಂತ್ರಿಗಳು ಹೆಚ್ಚಿನ ಸಹಕಾರ ನೀಡಬೇಕು. ಇದರಿಂದ ಪ್ರಾಧಿಕಾರ ಹೆಚ್ಚಿನ ಶಕ್ತಿಉ ಸಿಕ್ಕಿದಂತಾಗುತ್ತದೆ. ಕನ್ನಡ ನಾಡಿನ ನುಡಿ, ಜಲ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಪ್ರಾಧಿಕಾರಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು. ಮ.ಬೆಟ್ಟದಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿರುವುದು ಕಲಾವಿದರಿಗೆ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಮಾತನಾಡಿ, 2010ರಲ್ಲಿ ಪ್ರಾರಂಭವಾದ ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಸುಮಾರು 63 ತಾಲೂಕಿನ ಗಡಿಭಾಗಗಳಲ್ಲಿ ತನ್ನ ವ್ಯಾಪ್ತಿಯನ್ನು ವ್ಯಾಪಿಸಿದ್ದು. ಅಲ್ಲಿನ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕಾಸರಗೋಡು, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಲ್ಲಿ ಸಾಂಸ್ಕೃತಿಕ ಭವನವನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಗಡಿ ಪ್ರಾಧಿಕಾರದ ಅನುದಾನದಲ್ಲಿ ತಾಲೂಕಿನ ಕೊಂಬುಡಿಕ್ಕಿ ಗ್ರಾಮದ ಸರ್ಕಾರಿ ಶಾಲೆಗೆ ನೀಡಿರುವ ಸ್ಮಾರ್ಟ್ ಬೋರ್ಡ್ ಪ್ಯಾನೆಲ್ ವೀಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ತಹಸೀಲ್ದಾರ್ ಎನ್.ಕೆ ಚೈತ್ರಾ, ಗಡಿನಾಡು ಪ್ರದೇಶದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಗ್ರಾಪಂ ಅಧ್ಯಕ್ಷೆ ಅರ್ಚನಾ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net