

ಹನೂರು: ತಾಲೂಕಿನ ದಂಟಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಶನಿವಾರ ಕಾಡಾನೆಗಳ ಹಿಂಡು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಕೆಲಕಾಲ ಆತಂಕವನ್ನು ಉಂಟು ಮಾಡಿತು. ಈ ಮಾರ್ಗವು ಕಾವೇರಿ ವನ್ಯಜೀವಿ ವಿಭಾಗಕ್ಕೆ ಸೇರಿದ್ದು, ಅರಣ್ಯ ಪ್ರದೇಶದ ನಡುವೆ ಹಾದು ಹೋಗಿದೆ. ಈ ಭಾಗದಲ್ಲಿ ಕಾಡಾನೆಗಳು ಹೆಚ್ಚಾಗಿ ವಾಸಿಸುತ್ತಿವೆ. ಆದರೆ ರಸ್ತೆಯಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿರಲಿಲ್ಲ. ಮಧ್ಯಾಹ್ನ 3ರ ವೇಳೆಯಲ್ಲಿ ಮಳೆ ಸುರಿಯುತ್ತಿದ್ದಾಗ 6 ಕಾಡಾನೆಗಳು ಅರಣ್ಯ ಪ್ರದೇಶದಿಂದ ರಸ್ತೆಗೆ ಆಗಮಿಸಿ ಇಳಿಜಾರಿನತ್ತ ತುಸು ದೂರ ಸಂಚರಿಸಿದವು. ಈ ವೇಳೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಕಾಡಾನೆಗಳ ಹಿಂಡನ್ನು ನೋಡಿ ಆತಂಕಕ್ಕೆ ಒಳಗಾದರು. ಕೆಲಕಾಲ ನಿಂತಲ್ಲೇ ನಿಂತರು. ಕಾಡಾನೆಗಳು ಅರಣ್ಯ ಪ್ರದೇಶದೊಳಗೆ ತೆರಳಿದ ಬಳಿಕ ನಿಟ್ಟುಸಿರು ಬಿಟ್ಟು ತೆರಳಿದರು. ಈ ದೃಶ್ಯವನ್ನು ಸಾರ್ವಜನಿಕರೊಬ್ಬರು ಮೊಬೈಲ್ ಫೋನಿನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾರೆ. ಕಾಡಾನೆಗಳು ರಸ್ತೆಗೆ ಬಾರದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.