

ಹೊಳೆನರಸೀಪುರ : ಬಸವಣ್ಣನವರ ಸಮಾನತೆಯ ತತ್ವ ಮತ್ತು ಚಿಂತನೆಗಳ ಹಾದಿಯಲ್ಲಿ ಸಾಗಿದರೆ ಸಾಮಾಜಿಕ ಪ್ರಗತಿ ಸಾಧ್ಯ ಎಂದು ಮಾಜಿ ಶಾಸಕ ಡಾ. ಯತಿಂದ್ರ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಹಳ್ಳಿ ಮೈಸೂರು ಗ್ರಾಮದ ಶ್ರೀ ಆದಿಶಕ್ತಿ ಶೀಗೆತಾಳಮ್ಮ ದೇವಿ ಅಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ದೇವಾಲಯದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಕಲ್ಯಾಣ ಮಂಟಪ, ಪಾಕ ಶಾಲೆ ಮತ್ತು ವಸತಿಗೃಹಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಸರ್ಕಾರ ಆಡಳಿತ ಮಾಡುತ್ತಿದೆ. ಹಾಗಾಗಿ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲಾಗಿದೆ.ಬಡವರ, ದೀನ ದಲಿತರ ಮತ್ತು ಶೋಷಿತ ವರ್ಗಗಳ ಏಳಿಗೆಗೆ ನಮ್ಮ ಸರ್ಕಾರ ಕಂಕಣಬದ್ಧವಾಗಿದೆ ಎಂದರು.
ದೇಶ ಸುಭದ್ರವಾಗಿರಬೇಕಾದರೆ ಧರ್ಮಾಧಾರಿತವಾಗಿ ಮುನ್ನಡೆಯಬಾರದು. ಜಾತ್ಯತೀತವಾಗಿ ನಾವು ಮುನ್ನಡೆಯಬೇಕು. ಧರ್ಮಾಧಾರಿತವಾಗಿ ಮುನ್ನಡೆದ ರಾಷ್ಟ್ರಗಳು ಛಿದ್ರವಾಗಿವೆ ಎಂಬುದನ್ನು ನಾವು ಮನಗಾಣಬೇಕು ಎಂದರು.
ಹಳ್ಳಿ ಮೈಸೂರು ಹೋಬಳಿ ಜನತೆ ನನ್ನ ಮೇಲೆ ಅಪಾರ ಅಭಿಮಾನ ತೋರಿದ್ದಾರೆ. ಈ ಭಾಗದ ಜನರ ಮೇಲೆ ನನಗೆ ಅವಿನಾ ಸಂಬಂಧವಿದೆ. ಈ ಹೋಬಳಿಯ ಅಭಿವೃದ್ಧಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಗ್ರಾಮೀಣ, ಹಿಂದುಳಿದವರಿಗೆ ಶಕ್ತಿ ತುಂಬುವುದೇ ಕಾಂಗ್ರೆಸ ಸರ್ಕಾರದ ಮುಖ್ಯ ಉದ್ದೇಶ. ಸಮಾಜದಲ್ಲಿರುವ ಎಲ್ಲರೂ ಏಕತಾ ಮನೋಭಾವದಿಂದ ಶಾಂತಿಯುತ ಜೀವನ ನಡೆಸಬೇಕೆಂಬುದು ನಮ್ಮ ಸರ್ಕಾರದ ಆಶಯ ಎಂದರು.
ಹುಟ್ಟೂರಿಗೆ ಸೇವೆ ಮಾಡೋಣ:
ಕೆ.ಆರ್. ನಗರದ ಶಾಸಕ ರವಿಶಂಕರ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹುಟ್ಟೂರಿಗೆ ಕೈಲಾದ ಸೇವೆ ಮಾಡಿದರೆ ಧನ್ಯತೆ ಬರುತ್ತದೆ. ಈ ರೀತಿಯ ಧಾರ್ಮಿಕ, ಸಾಮಾಜಿಕ ಸೇವೆಯಲ್ಲಿ ನಾನು ಸದಾ ಹಳ್ಳಿ ಮೈಸೂರು ಹೋಬಳಿ ಜನರೊಂದಿಗೆ ಇರುತ್ತೇನೆ ಎಂದರು. ಕೆಪಿಎಸ್‌ಸಿ ಮಾಜಿ ಸದಸ್ಯ ಮತ್ತು ದೇವಾಲಯ ಅಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಎಚ್. ರವಿಕುಮಾರ್ ಮಾತನಾಡಿ, ನಮ್ಮ ಹೋಬಳಿ ಹಿಂದುಳಿದ ಪ್ರದೇಶವಾಗಿದೆ. ನೀರಾವರಿ ಯೋಜನೆಗಳು ಉಪಯೋಗಕ್ಕೆ ಬಾರದಾಗಿವೆ. ರೈತರು ಸಂಕಷ್ಟದಲ್ಲಿದ್ದಾರೆಂದರು. ಶಾಶ್ವತ ನೀರಾವರಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಬೇಕು. ಹೋಬಳಿ ಕೇಂದ್ರಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದರು. ಹಳ್ಳಿ ಮೈಸೂರು ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂಬ ಮನವಿಯನ್ನು ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.ಹಗಳ ಉದ್ಘಾಟನೆಯನ್ನು ಡಾ. ಯತೀಂದ್ರ ಸಿದ್ರಾಮಯ್ಯ ನೆರವೇರಿಸಿದರು. ಶಾಸಕ ರವಿಶಂಕರ್, ಡಾ. ಎಚ್. ರವಿಕುಮಾರ್, ಶ್ರೀ ಕಲ್ಯಾಣ ಸ್ವಾಮೀಜಿ, ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಬಸವ ಮಾಚಿದೇವ ಸ್ವಾಮೀಜಿ ಇದ್ದರು.