

ಹೊಳೆನರಸೀಪುರ : ಮೊಘಲರ ವಿರುದ್ಧ ಹೋರಾಡಿ ಮರಾಠ ಸಮ್ರಾಜ್ಯ ಸ್ಥಾಪಿಸಿದ ಛತ್ರವತಿ ಶಿವಾಜಿ ಮಹಾರಾಜರ ಸಾಹಸ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಮರಾಠ ಸಂಘದ ಅಧ್ಯಕ್ಷ ಈರೋಜಿರಾವ್ ಕದಂ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಹಾಗೂ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1630-1680 ರವರೆಗೆ ಶಿವಾಜಿ ಮಹಾರಾಜ್ ಅವರ ಆಡಳಿತ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. 1659ರಲ್ಲಿ ಶಿವಾಜಿ ಅಫ್ಜಲ್ ಖಾನ್ ಅವರನ್ನು ಮಣಿಸಿದ್ದಲ್ಲದೆ, ಅನೇಕ ರಾಜರ ಮೇಲೆ ಯುದ್ಧ ಸಾರಿ ಕೋಟೆಗಳನ್ನು ವಶಕ್ಕೆ ಪಡೆದು ಮರಾಠ ಸಾಮ್ರಾಜ್ಯದ ಸ್ವತಂತ್ರ ದೊರೆ ಆಗಿ ಆಡಳಿತ ನಡೆಸಿದರು. ಶಿವಾಜಿ ತಮ್ಮ ಬಲಿಷ್ಠ ಸೈನ್ಯಕ್ಕೆ ಗೆರಿಲ್ಲಾ ಯುದ್ಧ ಮಾದರಿ ಕಲಿಸಿದ್ದರು. ಈ ಮೂಲಕ ಅನೇಕ ಯುದ್ಧಗಳನ್ನು ಗೆದ್ದರು ಎಂದು ಬಣ್ಣಿಸಿದರು.
ಸಂತ ಸೇವಾಲಾಲ್ ಬಗ್ಗೆ ಮಾಹಿತಿ ನೀಡಿದ ಅವರು, 1739ರಲ್ಲಿ ಮಹಾರಾಷ್ಟ್ರದ ಲಂಬಾಣಿ ಬಂಜಾರಾ ಜನಾಂಗದಲ್ಲಿ ಜನಿಸಿದರು. ಬಾಲ್ಯದಿಂದಲೂ ಅಧ್ಯಾತ್ಮಿಕ ಚಿಂತನೆ ಬೆಳೆಸಿಕೊಂಡು ಅದನ್ನು ದೇಶಾದ್ಯಂತ ಸಾರಿದ್ದರು. ದೇವರ ಮೇಲೆ ಅಪಾರ ಭಕ್ತಿ ಇದ್ದರೆ ಸದಾ ನಮಗೆ ಒಳ್ಳೆಯದೇ ಆಗುತ್ತದೆ ಎಂದು ನಂಬಿದ್ದ ಸೇವಾಲಾಲ್, ಅಧ್ಯಾತ್ಮ ಚಿಂತನೆ ಮತ್ತು ಸೇವೆ ನೀಡುತ್ತಾ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಸರ್ಕಾರ ಮಹನೀಯರ ಜಯಂತಿ ಆಚರಿಸಲು ಅನುಮತಿ ನೀಡಿದೆ. ಹಾಗಾಗಿ ಮಹಾನ್ ಸಾಧಕರ ಜೀವನ ಚರಿತ್ರೆ ತಿಳಿದು ಉತ್ತಮ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ತಾಂತ್ರಿಕ ಅಧಿಕಾರಿ ಗೋಪಾಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಎಇಇ ಸೋಮಶೇಖರ್, ರಾಜಸ್ವ ನಿರೀಕ್ಷಕ ಲೋಕೇಶ್ ಭಾಗವಹಿಸಿದ್ದರು.