

ಹೊಳೆನರಸೀಪುರ: ಪಟ್ಟಣದ ಕವರ್ ಡಕ್ ಮೇಲಿರುವ ತರಕಾರಿ ಮಾರುಕಟ್ಟೆಯಲ್ಲಿ ಮಳೆ ನೀರು ಸಂಗ್ರಹವಾಗಿ ಮಾರಾಟಕ್ಕೆ ಅಡಚಣೆಯಾಗಿದೆ. ಮಳೆ ಬಂದರೆ ಮಾರುಕಟ್ಟೆ ಕೆಸರು ಗದ್ದೆಯಂತಾಗುತ್ತದೆ. ಕವರ್ ಡಕ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಗುಂಡಿಮಯವಾಗಿದೆ. ಹೀಗಾಗಿ ವ್ಯಾಪಾರ ವಹಿವಾಟಿಗೆ ಕಿರಿಕಿರಿಯಾಗುತ್ತಿದೆ. ಮಾರುಕಟ್ಟೆಗೆ ಆಗಮಿಸುವ ನಾಗರಿಕರು ಇಲ್ಲಿನ ಅವ್ಯವಸ್ಥೆಗೆ ಹಿಡಿಶಾಪ ಹಾಕುವಂತಾಗಿದೆ. ಗುಂಡಿ ಬಿದ್ದ ರಸ್ತೆಯಲ್ಲಿ ನೀರು ನಿಂತು ಮಾರಾಟಗಾರರಿಗೆ ಕಸಿವಿಸಿಯಾಗಿದೆ. ವಾಹನ ಸವಾರರು ರಸ್ತೆಯಲ್ಲಿ ಸಾಗಿದರೆ ಗುಂಡಿಯ ನೀರು ರಾಚುತ್ತದೆ. ಸಾಮಗ್ರಿಗಳ ಮೇಲೆ ಕೊಳಚೆ ನೀರು ಚೆಲ್ಲುವ ಮೂಲಕ ಅಶುದ್ಧಗೊಳ್ಳುತ್ತವೆ. ಇದರಿಂದ ವ್ಯಾಪಾರಿಗಳು ಬೇಸತ್ತು ಹೋಗಿದ್ದಾರೆ.
ಮಳೆ ನಿಲ್ಲುವ ತನಕ ಮಾರುಕಟ್ಟೆ ಗಬ್ಬೆದ್ದು ನಾರುತ್ತ, ಕೊಳಚೆ ಪ್ರದೇಶವಾಗಿ ಪರಿವರ್ತನೆಯಾಗುತ್ತದೆ. ಈ ಅವ್ಯವಸ್ಥೆಯಿಂದ ಮಾರುವವರಿಗೆ ಹಾಗೂ ಕೊಳ್ಳುವವರಿಗೆ ತೊಂದರೆ ಉಂಟಾಗುತ್ತದೆ. ಈ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿ ದುರಸ್ತಿ ಮಾಡುವಂತೆ ಆಗ್ರಹಿಸಿದ್ದಾರೆ.