

ಹೊಳೆನರಸೀಪುರದಲ್ಲಿ 11ನೇ ವಾರ್ಷಿಕೋತ್ಸವ
ಹೊಳೆನರಸೀಪುರ: ಪಟ್ಟಣದ ಕೋಟೆ ಶ್ರೀ ಮಾರಮ್ಮ ದೇವಾಲಯದಲ್ಲಿ ಮಾರಮ್ಮದೇವಿ ಹಬ್ಬ ಹಾಗೂ 11ನೇ ವಾರ್ಷಿಕ ವಿಶೇಷ ಪೂಜಾ ಮಹೋತ್ಸವ ಭಾನುವಾರ ಸಕಲ ಸಂಪ್ರದಾಯದೊಂದಿಗೆ ಸಂಪನ್ನಗೊಂಡಿತು. ಬ್ರಾಹ್ಮೀ ಮಹೂರ್ತದಲ್ಲಿ ಹೇಮಾವತಿ ತೀರದಲ್ಲಿ ಗಂಗೆ ಪೂಜೆ ನೆರವೇರಿಸಿ, ಗಂಗಾ ಕಳಸ ಹೊತ್ತ ಸುಮಂಗಲಿಯರು ಹಾಗೂ ಭಕ್ತರು ಮಂಗಳವಾದ್ಯ ಸಮೇತ ಮೆರವಣಿಗೆಯಲ್ಲಿ ದೇವಾಲಯಕ್ಕೆ ಆಗಮಿಸಿದರು. ಮಾರಮ್ಮ ದೇವಿ ಮೂಲ ವಿಗ್ರಹಕ್ಕೆ ಕಳಸದಿಂದ ತಂದು ಗಂಗೆಯಿಂದ ಅಭಿಷೇಕ ಮಾಡಲಾಯಿತು. ನಂತರ ಪುಣ್ಯಾಹ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ನೈವೇದ್ಯ ಸಮರ್ಪಣೆ ನೆರವೇರಿತು. 11ನೇ ವಾರ್ಷಿಕ ಪೂಜಾ ಮಹೋತ್ಸವದ ಪ್ರಯುಕ್ತ ದೇಗುಲದ ಆವರಣದಲ್ಲಿ ಚಂಡಿಕಾ ಹೋಮ ನಡೆಯಿತು. ಹೋಮದ ಪೂರ್ಣಾಹುತಿ ನಂತರ ತೀರ್ಥ, ಪ್ರಸಾದ ವಿನಿಯೋಗ ನಡೆಯಿತು.
ಪುರಸಭೆ ಮಾಜಿ ಅಧ್ಯಕ್ಷ ಪುಟ್ಟರಾಜು, ಮುಖಂಡ ಉಮೇಶ್ ಇತರರು ಇದ್ದರು. ಭಕ್ತರಿಗೆ ಪ್ರಸಾದ ವಿನಿಯೋಗಕ್ಕಾಗಿ ಬೃಹತ್ ಷಾಮಿಯಾನ, ಟೇಬಲ್ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ಪೂಜಾ ಕೈಂಕರ್ಯದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.