

ನಿವೃತ್ತ ಸೈನಿಕ ವಸಂತ್ ದೇವಾಂಗ ಅಭಿಮತ
ಕಾರ್ಗಿಲ್ ವಿಜಯೋತ್ಸವ
ಹೊಳೆನರಸೀಪುರ : ದೇಶಕ್ಕಾಗಿ ಪ್ರಾಣ ನೀಡಲು ಸಿದ್ಧರಾಗಿರುವ ಯೋಧರ ಸೇವೆ ಮತ್ತು ತ್ಯಾಗ ದೊಡ್ಡದು ಎಂದುನಿವೃತ್ತ ಸೈನಿಕ ವಸಂತ್ ದೇವಾಂಗ ತಿಳಿಸಿದರು. ಪಟ್ಟಣದ ಸುಭಾಷ್ ಚೌಕದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಸಂದರ್ಭ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿ ಅವರು ಮಾತನಾಡಿದರು.
1999ರಲ್ಲಿ 60 ದಿನ ಗಡಿಯಲ್ಲಿ ನಡೆದ ಯುದ್ಧ ಭಾರತದ ಸಾರ್ವಭೌಮತ್ವವನ್ನು ಕಾಪಾಡಿದೆ. ಭಾರತೀಯ ಸೇನೆ ನಮ್ಮ ದೇಶದ ಹೆಮ್ಮೆ ಎಂಬುದನ್ನು ಸಾಬೀತುಗೊಳಿಸಲಾಗಿದೆ. ಒಂದು ಧ್ಯೇಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟು, ಹೋರಾಡಿ ವೀರ ಮರಣ ಹೊಂದುವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು. ವಿವಿಧ ಯುದ್ಧಗಳಲ್ಲಿ ಹೋರಾಡಿ ಮಡಿದ ಯೋಧರಿಗೆ ಗೌರವ ಸೂಚಕವಾಗಿ ಮೌನ ಆಚರಿಸ ಲಾಯಿತು.
ಕಾರ್ಗಿಲ್ ವಿಜಯ ಸಂಭ್ರಮಕ್ಕಾಗಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ದೇಶ ಭಕ್ತಿಗೀತೆ ಗಾಯನ ನಡೆಯಿತು.
ಸಾಮಾಜಿಕ ಸೇವೆ, ಆಂತರಿಕ ಭದ್ರತೆ, ಆರೋಗ್ಯ ಮತ್ತು ಶಿಕ್ಷಣ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಪುರಸಭಾ ಅಧ್ಯಕ್ಷ ಎಚ್.ಕೆ. ಪ್ರಸನ್ನ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈಶ್ವರ, ನಿವೃತ್ತ ಯೋಧರಾದ ಚಂದ್ರಕಾಂತ್, ಮಹದೇವಯ್ಯ, ಬಸಪ್ಪ, ರವಿ, ರಮೇಶ, ಚನ್ನಕೇಶವ, ನಿಂಗರಾಜು, ಕುಮಾರ್, ಕ್ರೀಡಾಪಟು ವಿಜಯಕುಮಾರಿ ಇತರರು ಹಾಜರಿದ್ದರು.