ವಿದ್ಯಾರ್ಥಿಗಳು ಸೃಜನಶೀಲತೆ ಸಂಪಾದಿಸಬೇಕು

IMG_20240225_152250
Published on

ಬೆಟ್ಟದಪುರ : ವಿದ್ಯಾರ್ಥಿಗಳು ಜ್ಞಾನ ಪಡೆಯುವುದರೊಂದಿಗೆ ಸೃಜನಶೀಲತೆಯನ್ನು ಸಂಪಾದಿಸಬೇಕು ಎಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ ಸಹಾಯಕ ಪ್ರಾಧ್ಯಾಪಕ ಎಚ್.ಆರ್. ಪಾಂಡುರಂಗ ಸಲಹೆ ನೀಡಿದರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಡಿ.ತಮ್ಮಯ್ಯ ಸ್ಮಾರಕ ನವೋದಯ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಸಭಾಂಗಣ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಅನುಕರಣೆ ಪದ್ಧತಿಯನ್ನು ಆದಷ್ಟೂ ಬಿಡಬೇಕು. ನಾವು ನಮ್ಮಲ್ಲಿ ಇರುವ ಶಕ್ತಿ, ಪ್ರತಿಭೆಯನ್ನು ಲಭ್ಯ ವೇದಿಕೆಯಲ್ಲಿ ಅನಾವರಣ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸಿನ ಹಾದಿಯನ್ನು ಹಿಡಿಯಬೇಕು. ಯಾವುದೇ ವ್ಯಕ್ತಿಗೆ ಹಿಂಸಾ ಪ್ರವೃತಿ ಹಾಗೂ ಗರ್ವ ಇರಬಾರದು. ಗರ್ವ ಹೆಚ್ಚಾದರೆ ಅಂದುಕೊಂಡಿದನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.
ಪಾಠ ಬೋಧಿಸುವ ಗುರು, ಲೇಖನಿ ಹಿಡಿದ ಪ್ರತಿಭಾವಂತನನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಗುರುವಿನ ಬಗ್ಗೆ ಗೌರವಭಾವ ಇದ್ದವ ಉನ್ನತ ಸಾಧನೆ ಮಾಡುತ್ತಾನೆಂದು ಅವರು ಹೇಳಿದರು. ವಿದ್ಯಾಸಂಸ್ಥೆಯ ಖಜಾಂಚಿ ಪಿ.ರವಿ ಮಾತನಾಡಿ ಸಮೃದ್ಧ ಸಮಾಜ ನಿರ್ಮಾಣವಾಗಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು. ಶಿಕ್ಷೆ ಇಲ್ಲದೆ ಯಾವುದೇ ವಿದ್ಯಾರ್ಥಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಕಠಿಣ ಪರಿಶ್ರಮ ಹಾಗೂ ನಿರಂತರ ಅಭ್ಯಾಸದಿಂದ ಯಶಸ್ಸು ಕಾಣಬಹುದು ಎಂದರು.
ಪ್ರತಿಭಾ ಪುರಸ್ಕಾರ, 2022-2023ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ವು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಗಣ್ಯರಿಗೆ ಸನ್ಮಾನಿಸಲಾಯಿತು.ವಿದ್ಯಾಸಂಸ್ಥೆ ಅಧ್ಯಕ್ಷ ಚಂದ್ರಶೇಖರ, ಭೂ ದಾನಿ ಸರೋಜಮ್ಮ, ಆಡಳಿತಾಧಿಕಾರಿ ಜೆ.ಸಿ ನಟರಾಜ್, ಪ್ರಾಂಶುಪಾಲ ಸತೀಶ್, ಮುಖ್ಯಶಿಕ್ಷಕರಾದ ಮುರಳಿ, ಜಯಂತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net