

ಚಿಕ್ಕಬಳ್ಳಾಪುರ: ಎಚ್.ಎನ್.ವ್ಯಾಲಿ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸುವ ಅಗತ್ಯವಿದೆ. ಇದಕ್ಕೆ ಸಂಬಂಧಿಸಿದಂತೆ ನೀರಾವರಿ ಹೋರಾಟಗಾರರ ಮನವಿಯನ್ನು ಬೆಂಬಲಿಸುವುದಾಗಿ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ತಿಳಿಸಿದರು.
ನಗರದ ಮುಸ್ಟೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಈ ಭಾಗದಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಎಚ್.ಎನ್.ವ್ಯಾಲಿ ಸಂಸ್ಕರಿತ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದೆ. ಆದಷ್ಟು ಬೇಗ ಎತ್ತಿನಹೊಳೆ ಯೋಜನೆಯಡಿ ಈ ಭಾಗಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಭರವಸೆ ನೀಡಿದರು.
ಬಿಜೆಪಿ ಕೋಮು ರಾಜಕಾರಣದ ಮೂಲಕ ಜನರನ್ನು ವಿಭಜಿಸಲು ಯತ್ನಿಸುತ್ತಿದೆ. ಇದು ದೊಡ್ಡ ತಪ್ಪು. ಹಳ್ಳಿ ಹಳ್ಳಿಯಲ್ಲೂ ವಿವಿಧ ವರ್ಗಗಳ ಜನರು ಸಹೋದರಂತೆ ಜೀವನ ಸಾಗಿಸುತ್ತಿದ್ದಾರೆ. ಹಾಗೆಯೇ ಮೊದಲಿನಿಂದಲೂ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತಿದೆ. ಜನಪ್ರತಿನಿಧಿಗಳು ಭೇದಭಾವ ತೋರುವುದು ಸರಿಯಲ್ಲ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯರಾದ ಕೆ.ಎಂ.ಮುನೇಗೌಡ, ಕೆ.ಸಿ.ರಾಜಾಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಜಯರಾಮ್, ಪ್ರಧಾನ ಕಾರ್ಯದರ್ಶಿ ಪ್ರೆಸ್ ಸುರೇಶ್, ನಗರಸಭೆ ಸದಸ್ಯ ಕಣಿತಹಳ್ಳಿ ವೆಂಕಟೇಶ್ ಮತ್ತಿತರರು ಇದ್ದರು.
ಮಳೆಗಾಲಕ್ಕೂ ಮುನ್ನ ಕಾಮಗಾರಿ
5.5 ಕೋಟಿ ರೂ. ವೆಚ್ಚದ ನಗರದ ಮುಸ್ಟೂರು ಹಾಗೂ ದಿನ್ನೇಹೊಸಹಳ್ಳಿ ರಸ್ತೆ ಕಾಮಗಾರಿಗೆ ಶಾಸಕ ಪ್ರದೀಪ್ ಈಶ್ವರ್ ಚಾಲನೆ ನೀಡಿದರು. ಜಡಲತಿಮ್ಮನಹಳ್ಳಿ ರಸ್ತೆ ಕಾಮಗಾರಿ ಒಂದು ತಿಂಗಳಿನಲ್ಲಿ ಮುಗಿಯಲಿದೆ. ಕ್ಷೇತ್ರದಲ್ಲಿ ಭೂಮಿಪೂಜೆ ನೆರವೇರಿಸಿದ ಬಹುತೇಕ ಎಲ್ಲ ಕೆಲಸಗಳನ್ನು ಮಳೆಗಾಲದೊಳಗೆ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಬೃಹತ್ ಪ್ರತಿಭಟನೆ
ನಗರದ ಚಾಮರಾಜಪೇಟೆಯ ಅಂಬೇಡ್ಕರ್ ಕಾಲನಿ ನಿವಾಸಿಗಳನ್ನು ರೈಲ್ವೆ ಇಲಾಖೆ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಬೃಹತ್ ಹೋರಾಟನಡೆಯುತ್ತಿದೆ. ಯಾವುದೇ ಕಾರಣಕ್ಕೂ ಬಡವರ ಮನೆಗಳನ್ನು ಕೆಡವಲು ಬಿಡುವುದಿಲ್ಲ. ಹಲವು ದಶಕಗಳಿಂದಲೂ ದಲಿತರು ಜೀವನ ನಡೆಸುತ್ತಿದ್ದಾರೆ. ಇದರ ನಡುವೆ ನಿರಂತರವಾಗಿ ನಿವಾಸಿಗಳಿಗೆ ತೆರವಿನ ನೋಟಿಸ್ ಮೂಲಕ ಕಿರುಕುಳ ನೀಡಲಾಗುತ್ತಿದೆ. ಇದನ್ನು ಸಹಿಸಲಾಗಲ್ಲ. ರಾಜ್ಯ ಸರ್ಕಾರವು ಇಲ್ಲಿನ ಜನರ ಹಿತವನ್ನು ಕಾಪಾಡಲಿದೆ ಎಂದು ಶಾಸಕರು ತಿಳಿಸಿದರು.
ಎಲ್ಲ ವರ್ಗಕ್ಕೂ ಆದ್ಯತೆ
ಕ್ಷೇತ್ರದಲ್ಲಿ ಎಲ್ಲ ವರ್ಗದವರಿಗೂ ಆದ್ಯತೆ ಸಿಗಲಿದೆ. ಇದಕ್ಕೆ ನಗರಸಭೆ ನಾಮ ನಿರ್ದೇಶನದಲ್ಲಿ ಹಿಂದುಳಿದ, ಅಲ್ಪಸಂಖ್ಯಾತರನ್ನು ಪರಿಗಣಿಸಲಾಗಿದೆ. ಬಲಿಜ ಸಮುದಾಯಕ್ಕೆ ಶಾಸಕ ಸ್ಥಾನವನ್ನು ಕಾಂಗ್ರೆಸ್ ನೀಡಿದೆ. ಇಲ್ಲಿ ಯಾವುದೇ ಜನಾಂಗವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಹಾಗೆಯೇ ಯಾವುದೇ ಪಕ್ಷದವರು ತಪ್ಪು ಮಾಡಿದರೂ ಬಿಡುವುದಿಲ್ಲ. ಆಯಾ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಪ್ರಕಾರ ಕೈಗೊಳ್ಳುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.