

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದೊಂದಿಗೆ ಎಚ್.ಎನ್.ವ್ಯಾಲಿ ಸಂಸ್ಕರಿತ ನೀರಿನ ಯೋಜನೆಯನ್ನು ಜಾರಿಗೊಳಿಸಿದ್ದು ಇದಕ್ಕೆ (ಸಂಸದ ಡಾ ಕೆ.ಸುಧಾಕರ್) ಆಗ ನನ್ನ ಯೋಜನೆ, ನನ್ನ ಸಾಧನೆ ಎಂಬುದಾಗಿ ಹೇಳಿಕೊಳ್ಳುತ್ತಿದ್ದರು. ಇದೇ ವೇಳೆ ಮೂರನೇ ಹಂತದ ಶುದ್ದೀಕರಣದ ಅಗತ್ಯವಿದೆ ಎನ್ನುವುದು ಗೊತ್ತಿರಲಿಲ್ಲವೇ?. ಆಗ ಅವರು ಏನು ಮಾಡುತ್ತಿದ್ದರು? ಎಂದು ಸಚಿವ ಡಾ ಎಂ.ಸಿ.ಸುಧಾಕರ್ ಪ್ರಶ್ನಿಸಿದ್ದಾರೆ.
ಎಚ್.ಎನ್.ವ್ಯಾಲಿ ನೀರು ಕೇವಲ ಅಂತರ್ಜಲ ಮಟ್ಟ ವೃದ್ಧಿಗಾಗಿ, ಇದನ್ನು ಕೃಷಿ ಹಾಗೂ ಕುಡಿಯುವ ಸಲುವಾಗಿ ಬಳಸಬಾರದು ಎಂಬುದನ್ನು ಪ್ರಾರಂಭದ ಹಂತದಿಂದಲೇ ಹೇಳಲಾಗುತ್ತಿದೆ. ಇದರ ನಡುವೆ ಕೆಲವರು ಮೂರನೇ ಹಂತದ ಶುದ್ದೀಕರಣ ಅಗತ್ಯವಿದೆ. ಇದು ಜನರ ಅಳಿವು ಉಳಿವಿನ ಪ್ರಶ್ನೆ ಎಂಬ ಮಾತನ್ನು ಹೇಳಲಾಗುತ್ತಿದೆ. ಆದರೆ, ಹಿಂದೆ ನೀರನ್ನು ಹೇಗೆ ನೇರವಾಗಿ ಎರಡನೇ ಹಂತದ ಶುದ್ದೀಕರಣದಲ್ಲಿಯೇ ಕೆರೆಗಳಿಗೆ ಹರಿಸಲಾಯಿತು? ಎಂದು ಪ್ರಶ್ನಿಸಿದರು.
*ವಿಶ್ವಸಂಸ್ಥೆಯಿಂದ ಶ್ಲಾಘನೆ
ಚಿಕ್ಕಬಳ್ಳಾಪುರ ಸೇರಿದಂತೆ ನೆರೆಯ ಜಿಲ್ಲೆಗಳ ಭಾಗದಲ್ಲಿ ಅಂತರ್ಜಲ ವೃದ್ಧಿಗೆ ಎಚ್.ಎನ್.ವ್ಯಾಲಿ, ಕೆ.ಸಿ ವ್ಯಾಲಿ ನೀರು ಪೂರೈಸುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ತಂಡ ಇಲ್ಲಿಗೆ ಬಂದು ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಸಚಿವರು ತಿಳಿಸಿದರು.
ವಿಶ್ವಸಂಸ್ಥೆಯ ತಂಡವೇ ಅಧ್ಯಯನ ಮಾಡಿ, ಇದೊಂದು ಚಮತ್ಕಾರ ಎಂತಲೇ ಶ್ಲಾಘಿಸಿದೆ. ಹಾಗೆಯೇ ಬೇರೆ ಬೇರೆ ನಗರಗಳಲ್ಲಿ ಈ ಪದ್ದತಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡುವುದಾಗಿಯೂ ಹೇಳಿಸಿದೆ ಎಂದು ತಿಳಿಸಿದರು.
ಜು.2 ರಂದು ನಂದಿ ಗಿರಿಧಾಮದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದ್ದು ಈ ಭಾಗದ ಜಿಲ್ಲೆಗಳಿಗೆ ಹಲವು ಯೋಜನೆಗಳನ್ನು ಮುಖ್ಯಮಂತ್ರಿಗಳು ಘೋಷಿಸಲಿದ್ದಾರೆ. ನಂದಿ ಗಿರಿಧಾಮದ ರಸ್ತೆಯನ್ನು 9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.