

ಚಿಕ್ಕಬಳ್ಳಾಪುರ: ತ್ಯಾಜ್ಯ ಸಂಸ್ಕರಿಸಿದ ನೀರು ಪೂರೈಕೆಯ ಎಚ್.ಎನ್.ವ್ಯಾಲಿ ಯೋಜನೆಯಿಂದ ಅಂತರ್ಜಲ ಮಟ್ಟ ಸುಧಾರಣೆಯಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಚೇನಹಳ್ಳಿಯಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಹಿಂದೆ ಈ ಭಾಗದಲ್ಲಿ ಮಳೆಯ ಅಭಾವ ಮತ್ತು ಬತ್ತಿ ಹೋದ ಅಂತರ್ಜಲ ಮಟ್ಟ ಸಮಸ್ಯೆಯಿಂದ ಪ್ರತಿ ವಷರ್ ಅನೇಕ ಮಂದಿ ರೈತರು ಕೊಳವೆ ಬಾವಿ ಕೊರೆಸಲು ಲಕ್ಷಾಂತರ ರೂ. ಹಣ ಖರ್ಚು ಮಾಡಿದರೂ ತೊಂದರೆ ಅನುಭವಿಸುತ್ತಿದ್ದರು. ಆದರೂ ಸಮರ್ಪಕವಾಗಿ ನೀರು ಸಿಗುತ್ತಿರಲಿಲ್ಲ.
ಆದರೆ, ಎಚ್.ಎನ್.ವ್ಯಾಲಿ ನೀರಾವರಿ ಯೋಜನೆಯ ಅನುಷ್ಠಾನದಿಂದ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಇದರಿಂದ ಹೊಸದಾಗಿ ಕೊಳವೆಬಾವಿ ಕೊರೆಸುವವರ ಸಂಖ್ಯೆ ಕಡಿಮೆಯಾಗಿದೆ ಎಂದರು.
ಕಳೆದ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಧಾರಾಕಾರ ಮಳೆ, ಕೆರೆಗಳಲ್ಲಿ ನೀರಿನ ಸಮೃದ್ಧಿಯಿಂದ ಈ ಭಾಗದ ರೈತರು ಕೃಷಿ ಚಟುವಟಿಕೆಯನ್ನು ಕೈಗೊಳ್ಳಲು ಅನುಕೂಲವಾಗಿದೆ. ನೀರಾವರಿ ಸಮಸ್ಯೆ ಇಲ್ಲದಿರುವುದರಿಂದ ಹಲವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಎಚ್.ಎನ್.ವ್ಯಾಲಿ ಯೋಜನೆಯ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಂಡು, ತ್ವರಿತಗತಿಯಲ್ಲಿ ಈ ಭಾಗದ ಬಹುತೇಕ ಕೆರೆಗಳಿಗೆ ನೀರು ಹರಿಸಲಾಗಿದೆ. ಇದರ ಜತೆಗೆ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳು ಬಿರುಸಿನಿಂದ ನಡೆಯುತ್ತಿವೆ. ಆಷ್ಟು ಬೇಗ ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ಆದ್ಯತೆಯ ಮೇಲೆ ನೀರು ಹರಿಸಲಾಗುತ್ತದೆ ಎಂದರು. ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಪಿ.ಶಿವಶಂಕರ್, ತಹಸೀಲ್ದಾರ್ ಶ್ರೀನಿವಾಸ್ ಮತ್ತಿತರರು ಇದ್ದರು.
ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಮಂಚೇನಹಳ್ಳಿ ತಾಲೂಕಿನ ಪೆದ್ದರೆಡ್ಡಿ ನಾಗೇನಹಳ್ಳಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಮತ್ತು ಅದ್ದೆಕೊಪ್ಪ, ದೇವರಕೊಂಡಹಳ್ಳಿ ಗ್ರಾಮದ ಮಾದರಿ ಅಂಗನವಾಡಿ ಕೇಂದ್ರದ ಕಟ್ಟಡ, ಕಾಟನಾಗೇನಹಳ್ಳಿಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಉದ್ಘಾಟನೆ, ಕಾಮಗರೆಡ್ಡಿ, ದೇವರಕೊಂಡಹಳ್ಳಿ, ಬಿಸಲಹಳ್ಳಿಯಲ್ಲಿ ಚೆಕ್ ಡ್ಯಾಂ, ಹಳೇಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಮೂರು ಕೊಠಡಿಗಳ ಕಾಮಗಾರಿ, ಉಪ್ಪರಹಳ್ಳಿಯ ಸರ್ಕಾರಿಯ ಕಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ 2 ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಶ್ಯಾಂಪುರ ಹಾಲು ಉತ್ಪಾದಕ ಸೊಸೈಟಿಯ ವತಿಯಿಂದ 22 ಸ್ವಸಹಾಯ ಸಂಘಗಳಿಗೆ ಚೆಕ್ ವಿತರಿಸಲಾಯಿತು.
60 ಕೋಟಿ ರೂ. ಮಂಜೂರು: ಎಚ್.ಎನ್.ವ್ಯಾಲಿ, ಎತ್ತಿನಹೊಳೆ ಯೋಜನೆ ಸೇರಿ ವಿವಿಧ ಜಲಮೂಲಗಳಿಂದಲೂ ಈ ಭಾಗಕ್ಕೆ ನೀರನ್ನು ಹರಿಸುವ ಮಹದಾಯಶವನ್ನು ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಬಾಗೇಪಲ್ಲಿ ತಾಲೂಕಿನ ಕೆರೆಗಳಿಗೆ ನೀರು ಹರಿಸಲು 60 ಕೋಟಿ ರೂ. ಮಂಜೂರು ಮಾಡಿದೆ ಎಂದು ಸಚಿವರು ತಿಳಿಸಿದರು.