ಬೆಳಗಾವಿ ‌ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಸಾವು!

IMG-20250128-WA0013.jpg
Published on

ಬೆಳಗಾವಿ: ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿ ಬಾಣಂತಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಮತ್ತೊಂದೆಡೆ ವೈದ್ಯರ ನಿರ್ಲಕ್ಷೃದಿಂದ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ದೂರಿದ್ದಾರೆ. ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಅಂಜಲಿ ಪಾಟೀಲ (31) ಮೃತ ಬಾಣಂತಿ. ವೈದ್ಯರು ಜ.22ರಂದು ಹೆರಿಗೆಗೆ ದಿನಾಂಕ ನೀಡಿದ್ದರು. ಆದರೆ, ಹೆರಿಗೆ ನೋವು ಕಾಣಿಸಿದ ಹಿನ್ನೆಲೆ ಮೃತ ಅಂಜಲಿ ಪಾಟೀಲ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮೊದಲು ನಾರ್ಮಲ್ ಹೆರಿಗೆ ಆಗುತ್ತದೆ ಎಂದು ಹೇಳಿದರು. ತದನಂತರ ಹೈರಿಸ್ಕ್ ಪ್ರೆಗ್ನೆನ್ಸಿ ಎಂದು ಹೇಳಿ ಸಿಜೇರಿಯನ್ ಮಾಡಿದ್ದರು. ಹೆರಿಗೆಯಾದಾಗ ಅಂಜಲಿ ಆರೋಗ್ಯ ಸ್ಥಿರವಾಗಿತ್ತು. ಆದರೆ, ಮಂಗಳವಾರ ಬೆಳಗ್ಗೆ ಆರೋಗ್ಯ ಸ್ಥಿತಿ ಬಿಗಡಾಯಿಸಿ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷೃದಿಂದಲೇ ಈ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷೃ ಖಂಡಿಸಿ ಬಿಮ್ಸ್ ಆಸ್ಪತ್ರೆಯ ಶವಾಗಾರದ ಎದುರು ನಿಲಜಿ ಗ್ರಾಮಸ್ಥರು ಹಾಗೂ ಮೃತ ಬಾಣಂತಿ ಅಂಜಲಿ ಪಾಟೀಲ್ ಸಂಬಂಧಿಕರು ದಿಢೀರ ಪ್ರತಿಭಟನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಆಮ್ನಿಯೊಟೆಕ್ ಪ್ಲೂಯಿಡ್ ಎಂಬಾಲೀಸ್ ಕಾರಣ: ಬಿಮ್ಸ್ ಹೆರಿಗೆ ವಿಭಾಗದ ಮುಖ್ಯಸ್ಥ ಡಾ.ವಸಂತ ಕಬ್ಬೂರ ಮಾತನಾಡಿ, ಸೋಮವಾರ ಸಂಜೆ 4ಗಂಟೆಗೆ ಅಂಜಲಿ ಪಾಟೀಲ ಒಪಿಡಿಗೆ ಬಂದಿದ್ದರು. ಜ.22ರಂದು ಹೆರಿಗೆ ದಿನಾಂಕ ನೀಡಲಾಗಿತ್ತು. ಒಪಿಡಿಯಲ್ಲಿ ಪರಿಶೀಲನೆ ನಡೆಸಿದಾಗ ಮಗವಿನ ಹೃದಯ ಬಡಿತ ಕಡಿಮೆ ಆಗಿತ್ತು. ಆ ಕಾರಣಕ್ಕೆ ಸಿಜೇರಿಯನ್ ಮೂಲಕ ರಾತ್ರಿ 11ಕ್ಕೆ ಹೆರಿಗೆ ಮಾಡಲಾಗಿದ್ದು, ಬೆಳಗ್ಗೆ 5 ಗಂಟೆಗೆ ಮೃತಪಟ್ಟಿದ್ದಾರೆ. ಅವರಿಗೆ ರಕ್ತ ಹೆಪ್ಪುಗಟ್ಟಿ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಅವರ ಸಾವಿಗೆ ಆಮ್ನಿಯೊಟೆಕ್ ಪ್ಲೊಯಿಡ್ ಎಂಬಾಲೀಸ್ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಳಿಕ ನಿಖರ ಕಾರಣ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net