

ಬೆಳಗಾವಿ : ಇಲ್ಲಿನಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ತಡವಾಗುತ್ತಿದೆ. ಆದ್ದರಿಂದ ಮೊದಲು ಹಂತ ಹಂತವಾಗಿ ಆರೋಗ್ಯ ಸೇವೆ ಆರಂಭಿಸಬೇಕು. ನಂತರದ ದಿನಗಳಲ್ಲಿ ಆಸ್ಪತ್ರೆ ಉದ್ಘಾಟನೆಗೆ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.
ನಗರದ ಸುವರ್ಣ ವಿಧಾನಸೌದದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ನಿಗದಿತ ಸಮಯದಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ ಮಾತನಾಡಿ, ಬೆಳಗಾವಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಶೀಘ್ರ ಉದ್ಘಾಟನೆಗೊಳಿಸಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ ಒತ್ತಾಯಿಸಿದರು.
ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಗೆ ಬರುವ ಜಿಲ್ಲಾ ಆಸ್ಪತ್ರೆಗಳ ಆಡಳಿತದಲ್ಲಿ ಜಿಲ್ಲಾಡಳಿತಕ್ಕೆ ಪ್ರಮುಖ ಜವಾಬ್ದಾರಿ ನೀಡಲು ಸರಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚುವರಿಗೆ ಮನವಿ ಮಾಡಿಕೊಂಡರು.
ತಜ್ಞ ವೈದ್ಯರನ್ನು ಕರೆತಂದು ಜನರಿಗೆ ಉತ್ತಮ ಚಿಕಿತ್ಸೆ ನೀಡಲು ಅನುಕೂಲವಾಗಬೇಕಾದರೆ ಸರಕಾರಿ ಕ್ಯಾನ್ಸರ್ ಆಸ್ಪತ್ರೆಯನ್ನು ಬೆಳಗಾವಿ ನಗರದಲ್ಲಿಯೇ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಶಾಲೆಗಳಿಗೆ ಮೂಲಸೌಕರ್ಯಗಳನ್ನು ಕಾಲಮಿತಿಯಲ್ಲಿ ಒದಗಿಸಬೇಕು ಎಂದು ಪರಿಷತ್ ಸದಸ್ಯ ನಾಗರಾಜ್ ಯಾದವ ಹೇಳಿದರು.
ಉದ್ಯೋಗ ಸೃಷ್ಟಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆ ಸ್ಥಾಪನೆಗೆ ಅವಕಾಶ ಒದಗಿಸಬೇಕು ಎಂದು ಯಾದವ ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಮಾತನಾಡಿ,ನಗರದ ಕೆಲವು ಸರಕಾರಿ ಶಾಲೆಗಳಿಗೆ ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ಧಿ ಅನುದಾನದಡಿ ಶಾಲೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಾದರೆ ತಾಂತ್ರಿಕ ತೊಂದರೆಯಾಗುತ್ತಿದ್ದು, ಅದನ್ನು ಸರಿಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ತಿಳಿಸಿದರು.