

ವಿಜಯವಾಣಿ ಸುದ್ದಿಜಾಲ ಗದಗ
ಚುನಾವಣಾ ಸಂದರ್ಭದಲ್ಲಿ ಮಾತಿನ ಮೇಲೆ ಹಿಡಿತ ಇರಬೇಕು. ಅದರಲ್ಲೂ ದೊಡ್ಡ ನಾಯಕರು ನೀಡುವ ಹೇಳಿಕೆ ಕೀಳಮಟ್ಟದ್ದಾಗಿದರೆ ಶೋಭೆ ತರುವುದಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಸಚಿವ ಎಚ್. ಕೆ. ಪಾಟೀಲ ಆಕ್ರೊಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತುಗಳು ಅವರಿಗೆ ಶೋಭೆ ತರುವಂತಹ ಮಾತಾಗಿರಲಿಲ್ಲ. ಮೈಸೂರು, ಹಂಪಿ ಹಾಗೂ ಬಾದಾಮಿ ಕ್ಷೇತ್ರಗಳನ್ನು ಜಾಗತಿಕದಲ್ಲಿ ಮಿನುಗುವಂತೆ ಮಾಡುತ್ತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ಈಗಾಗಲೇ ರಾಜ್ಯದ ಹಲವು ಪ್ರವಾಸಿ ತಾಣಗಳನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆ ಆಗಿವೆ ಎಂಬುದು ಅವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
ಕರ್ನಾಟಕ ಎಂದರೆ ಪ್ರವಾಸೋದ್ಯಮಕ್ಕೆ ಯೋಗ್ಯವಲ್ಲ ಎಂದು ಪ್ರಧಾನಿ ಮೋದಿ ಭಾವಿಸಿದ್ದಾರೆ. ರಾಜ್ಯಕ್ಕೆ ಕಳೆದ 10 ವರ್ಷಗಳಲ್ಲಿ ಪ್ರವಾಸಿ ತಾಣಗಳಿಗೆ ಕೇಂದ್ರ ಸರ್ಕಾರ 225 ಕೋಟಿ ಬಿಡುಗಡೆ ಆಗಿದೆ. ಆದರೆ, ಈ ಯೋಜನೆಗಳೆಲ್ಲ ಹಳೆಯ ಯೋಜನೆಗಳಾಗಿವೆ. ಹೊಸ ಯೋಜನೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರದಿಂದ ಒಂದು ನೈಯಾ ಪೈಸಾ ಬಿಡುಗಡೆ ಮಾಡಲಿಲ್ಲ. ಕಡಲ ತೀರ ಯೋಜನೆಗಳಲ್ಲಿ 23 ಸ್ಥಳಗಳನ್ನು ಗುರುತಿಸಲಾಗಿತ್ತು. ಈ ಯೋಜನೆಗಳಿಗೆ 19 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಯೋಜನೆ ಸಂಪೂರ್ಣ ಸ್ಥಗಿತಗೊಳಿಸಲಾಯಿತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಸಂವಿಧಾನ ದುರ್ಬಳಕೆ ಮಾಡಿಕೊಂಡಿತ್ತು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಎಚ್.ಕೆ. ಪಾಟೀಲ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೇಂದ್ರ ಸರ್ಕಾರದ ವಿರುದ್ಧ ಸುದ್ದಿಗೋಷ್ಟಿ ಮಾಡಿದರು. ಬಿಜೆಪಿ ಸಂಸದರೇ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಸಂವಿಧಾನ ಬಗ್ಗೆ ಬಿಜೆಪಿ ಪಕ್ಷಕ್ಕೆ ಗೌರವ ಇಲ್ಲ ಎಂದು ಕಿಡಿ ಕಾರಿದರು.
ಮಹಿಳೆಯರಿಗೆ ಬಗ್ಗೆ ಅಪಹಾಸ್ಯ ಬೇಡ:
ಉಚಿತ ಬಸ್ ಸೇವೆಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರ ಸ್ವಾಮಿ ಹೇಳಿಕೆಗೆ ಕಿಡಿಕಾರಿದ ಎಚ್.ಕೆ. ಪಾಟೀಲ, ಮಹಿಳೆಯರ ಬಗ್ಗೆ ಅಪಹಾಸ್ಯ ಬೇಡ. ಮಹಿಳೆಯರಿಗೆ ಕ್ಷಮೆ ಕೋರದೇ ಇದ್ದರೆ ಕುಮಾರಸ್ವಾಮಿ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ. ಕಳಂಕ ಮಾತುಗಳನ್ನು ಆಡುವ ಮೂಲಕ ಪ್ರಮಾದ ಎಸಗಿದ್ದಾರೆ. ಮಹಿಳೆಯರ ಚಾರಿತ್ರ್ಯ ವದೆ ಮಾಡುವ ಹೇಳಿಕೆ ಹಿಂಪಡೆದು ಕ್ಷಮೆ ಕೋರಬೇಕು. ಚುನಾವಣಾ ಆಯೋಗ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಗುರುನಾಥ ದಾನಪ್ಪನ್ನವರ, ಸುಜಾತಾ ದೊಡ್ಡಮನಿ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಬಿ.ಬಿ. ಅಸೂಟಿ ಇತರರು ಇದ್ದರು.